ಸರಸಕ್ಕೆ ಪೀಡಿಸಿದ ಮಾವನ ಕಾಟದಿಂದ ಬೇಸತ್ತು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಆತ್ಮಹತ್ಯೆ

| Published : Jan 17 2025, 09:48 AM IST

rape of a girl child

ಸಾರಾಂಶ

ತಂದೆಯ ತಂಗಿ ಗಂಡನ ಬ್ಲ್ಯಾಕ್‌ ಮೇಲ್‌ ಕಾಟದಿಂದ ಬೇಸತ್ತು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು : ತಂದೆಯ ತಂಗಿ ಗಂಡನ ಬ್ಲ್ಯಾಕ್‌ ಮೇಲ್‌ ಕಾಟದಿಂದ ಬೇಸತ್ತು ಮಹಿಳಾ ಸಾಫ್ಟ್‌ವೇರ್‌ ಇಂಜಿನಿಯರ್‌ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದ ಎಸ್‌ವಿಎಸ್‌ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಸುಹಾಸಿ ಎಸ್‌.ಸಿಂಗ್‌(24) ಮೃತ ಟೆಕಿ. ಜ.12ರಂದು ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ರಾಧಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಮೃತಳ ತಾಯಿ ನೀಡಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿ ಪ್ರವೀಣ್‌ ಸಿಂಗ್‌(42) ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಆತ್ಮಹತ್ಯೆಗೆ ಶರಣಾದ ಸುಹಾಸಿ ಸಿಂಗ್‌ ಕಳೆದ ಆರು ವರ್ಷಗಳಿಂದ ತನ್ನ ತಂದೆಯ ತಂಗಿ(ಅತ್ತೆ) ಸಂಧ್ಯಾ ಸಿಂಗ್‌ ಮತ್ತು ಆಕೆ ಗಂಡ ಪ್ರವೀಣ್‌ ಸಿಂಗ್‌ ಜತೆಗೆ ಕೆ.ಆರ್‌.ಪುರದ ಎಸ್‌ವಿಎಸ್‌ ಪ್ಯಾರಡೇಸ್‌ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಸುಹಾಸಿ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರೆ, ಆರೋಪಿ ಪ್ರವೀಣ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರಜೆ ದಿನಗಳಲ್ಲಿ ಇಬ್ಬರು ಪ್ರವಾಸಕ್ಕೆ ಹೋಗುತ್ತಿದ್ದರು.

ಹೀಗಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಈ ವೇಳೆ ಆರೋಪಿ ಪ್ರವೀಣ್‌, ಸುಹಾಸಿಯ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಪೆನ್‌ಡ್ರೈವ್‌ನಲ್ಲಿ ಇರಿಸಿಕೊಂಡಿದ್ದ. ಇತ್ತೀಚೆಗೆ ಈ ವಿಚಾರ ಪ್ರವೀಣ್‌ ಪತ್ನಿಗೂ ಗೊತ್ತಾಗಿತ್ತು. ಬಳಿಕ ಸುಹಾಸಿ, ಪ್ರವೀಣ್‌ನಿಂದ ಅಂತರ ಕಾಯ್ದುಕೊಂಡಿದ್ದಳು.

ಖಾಸಗಿ ಕ್ಷಣಕ್ಕಾಗಿ ಬ್ಲ್ಯಾಕ್‌ ಮೇಲ್‌:

ಆದರೂ ಆರೋಪಿ ಪ್ರವೀಣ್‌, ಸುಹಾಸಿ ಜತೆ ಖಾಸಗಿ ಕ್ಷಣ ಕಳೆಯಲು ಒತ್ತಾಯಿಸುತ್ತಿದ್ದ. ಜ.12ರಂದು ಐಟಿಪಿಎಲ್‌ ಮುಖ್ಯರಸ್ತೆಯ ರಾಧಾ ಹೋಟೆಲ್‌ನಲ್ಲಿ ರೂಮ್‌ ಬುಕ್‌ ಮಾಡಿ ಸುಹಾಸಿಗೆ ಆಹ್ವಾನ ನೀಡಿದ್ದ. ರೂಮ್‌ಗೆ ಬಾರದಿದ್ದಲ್ಲಿ ಖಾಸಗಿ ವಿಡಿಯೋಗಳನ್ನು ತಂದೆ-ತಾಯಿಗೆ ಕಳುಹಿಸುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದ.

ಈತನ ಕಾಟ ತಾಳಲಾರದೆ, ಅಂದು ಸಂಜೆ 6 ಗಂಟೆಗೆ ಸುಹಾಸಿ ಪೆಟ್ರೋಲ್‌ ಖರೀದಿಸಿ ಜತೆಯಲ್ಲಿ ಇರಿಸಿಕೊಂಡು ರಾಧಾ ಹೋಟೆಲ್‌ ರೂಮ್‌ಗೆ ತೆರಳಿದ್ದಾಳೆ. ಈ ವೇಳೆ ಪ್ರವೀಣ್‌ ಬಳಿ ಈ ವಿಚಾರ ಇಲ್ಲಿಗೆ ಬಿಟ್ಟು ಬಿಡುವಂತೆ ಮನವಿ ಮಾಡಿದ್ದಾಳೆ. ನನ್ನ ಸಹವಾಸಕ್ಕೆ ಬಾರದಂತೆ ಬೇಡಿಕೊಂಡಿದ್ದಾಳೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ:

ಆದರೂ ಆರೋಪಿ ಪ್ರವೀಣ್‌ ಖಾಸಗಿ ಕ್ಷಣ ಕಳೆಯಲು ಒತ್ತಾಯಿಸಿದ್ದಾನೆ. ಇದರಿಂದ ಬೇಸರಗೊಂಡ ಸುಹಾಸಿ, ರೂಮ್‌ ಒಳಗೆ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಗಾಬರಿಗೊಂಡ ಆರೋಪಿ ಪ್ರವೀಣ್‌, ಸುಹಾಸಿಯನ್ನು ಸ್ನಾನದ ಕೋಣೆಗೆ ಎಳೆದೊಯ್ದು ಶವರ್‌ ಆನ್‌ ಮಾಡಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾನೆ. ಆಗ ಆತನಿಗೂ ಸುಟ್ಟು ಗಾಯಗಳಾಗಿವೆ. ಅಷ್ಟರಲ್ಲಿ ಹೋಟೆಲ್‌ ಸಿಬ್ಬಂದಿ ಸಹಾಯಕ್ಕೆ ಧಾವಿಸಿ ಸುಹಾಸಿ ಮತ್ತು ಪ್ರವೀಣ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಂಕಿಯಿಂದ ಸುಟ್ಟಿ ಗಂಭೀರವಾಗಿ ಗಾಯಗೊಂಡಿದ್ದ ಸುಹಾಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಎಚ್‌ಎಎಲ್‌ ಠಾಣೆ ಪೊಲೀಸರು ಪರಿಶೀಲಿಸಿದ್ದಾರೆ. ಈ ಸಂಬಂಧ ಮೃತ ಸುಹಾಸಿ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಪ್ರವೀಣ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಸಂಬಂಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.