ಸಾರಾಂಶ
ಬೆಂಗಳೂರು : ಸೈಬರ್ ದುಷ್ಕರ್ಮಿಗಳು ಮಹಿಳಾ ಸಾಫ್ಟ್‌ವೇರ್ ಇಂಜಿನಿಯರೊಬ್ಬರ ಇ-ಮೇಲ್ ಹ್ಯಾಕ್ ಮಾಡಿ ವೈಯಕ್ತಿಕ ಫೋಟೋ ಮಾರ್ಫ್ ಮಾಡಿ 2.50 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಟ್‌ಫೀಲ್ಡ್‌ನ ಪಿ.ಜಿ. ನಿವಾಸಿಯಾಗಿರುವ 29 ವರ್ಷದ ಮಹಿಳಾ ಟೆಕಿಗೆ ದುಷ್ಕರ್ಮಿಗಳು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ಇತ್ತೀಚೆಗೆ ದೂರುದಾರೆಯ ಇ-ಮೇಲ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಗೂಗಲ್ ಲಿಂಕ್ ಬಳಸಿಕೊಂಡು ದೂರುದಾರೆಯ ವೈಯಕ್ತಿಕ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲವಾಗಿ ಮಾರ್ಫ್ ಮಾಡಿ ವಿಡಿಯೋ ಸೃಷ್ಟಿಸಿದ್ದಾರೆ. ಬಳಿಕ ಆ ವಿಡಿಯೋ ಹಾಗೂ ಫೋಟೊಗಳನ್ನು ದೂರುದಾರೆಯ ಅಕ್ಕನ ಗಂಡನಿಗೆ ಕಳುಹಿಸಿದ್ದಾರೆ. 2.50 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಒಂದು ವೇಳೆ ಹಣ ಕೊಡದಿದ್ದಲ್ಲಿ ಈ ವಿಡಿಯೋ ಹಾಗೂ ಫೋಟೋಗಳನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್ಲೌಡ್ ಮಾಡುವುದಾಗಿ ಸಂದೇಶ ಕಳುಹಿಸಿ ದೂರುದಾರೆಯನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.