ಸಾರಾಂಶ
ಆ ಕಳ್ಳ ಒಳ್ಳೆಯವ: ಅಜ್ಜಿ ರಾಕ್, ಪೊಲೀಸ್ ಶಾಕ್!
- ದರೋಡೆ ಬಳಿಕ ಅಜ್ಜಿಯ ಕಾಲಿಗೆ ಬಿದ್ದ ಕಳ್ಳ । ಸದನಲ್ಲಿ ಹದಿಹರೆಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದ್ದೇಕೆ?
ಆ ಕಳ್ಳ ಒಳ್ಳೆಯವ: ಅಜ್ಜಿ ರಾಕ್, ಪೊಲೀಸ್ ಶಾಕ್!
- ದರೋಡೆ ಬಳಿಕ ಅಜ್ಜಿಯ ಕಾಲಿಗೆ ಬಿದ್ದ ಕಳ್ಳ । ಸದನಲ್ಲಿ ಹದಿಹರೆಯದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದ್ದೇಕೆ?
ಈ ಕುಣಿಗಲ್ ಗಿರಿ ಮತ್ಯಾರೂ ಅಲ್ಲ. ನನ್ನ ಹೆಸರನ್ನು ಮೋದಿ, ಸಿದ್ದರಾಮಯ್ಯ ಜಪಿಸುವಂತಹ ಕೆಲಸ ಮಾಡುತ್ತೇನೆ ಅಂತ ಘೋಷಿಸಿ ರಾಜಧಾನಿಯಲ್ಲಿ ಸರಣಿ ದರೋಡೆ ಮೂಲಕ ಹಾವಳಿ ಇಟ್ಟಿದ್ದ ದರೋಡೆಕೋರ. ಈ ದರೋಡೆಕೋರನ ಸ್ಪೆಷಾಲಿಟಿ ಏನೆಂದರೆ ಮನೆಗೆ ನುಗ್ಗಿ ದರೋಡೆ ಮಾಡೋದು. ಆದರೆ, ಮಹಿಳೆಯರು ಹಾಗೂ ವೃದ್ದರ ಮೇಲೆ ಕೈ ಹಾಕುತ್ತಿರಲಿಲ್ಲ.
ನೀವು ಕಳ್ಳನೋ, ಸುಳ್ಳನೋ, ದರೋಡೆಕೋರನೋ, ಭ್ರಷ್ಟ ಸರ್ಕಾರಿ ಅಧಿಕಾರಿಯೋ... ಅಷ್ಟೇ ಏಕೆ ರಾಜಕಾರಣಿಯೇ ಆಗಿರಿ. ಜನರನ್ನು ಲೂಟಿ ಮಾಡಿ ಪರ್ವಾಗಿಲ್ಲ. ಆದರೆ, ಲೂಟಿ ಮಾಡಿದ ನಂತರ ಅದೇ ಜನರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡು ಬಿಡಿ! ನಿಮ್ಮ ಬಾರಾ ಖೂನ್ ಮಾಫ್!!!
ಇದೆಂತಹ ಲಾಜಿಕ್ಕು ಅನ್ನಬೇಡಿ. ಇದೇ ಸರಿಯಾದ ಲಾಜಿಕ್ಕು. ಏಕೆಂದರೆ, ಚುನಾವಣೆ ಸಮೀಪ ಬಂದಾಗ ನಿಮ್ಮನ್ನು ಲೂಟಿ ಮಾಡಿದ ರಾಜಕಾರಣಿ ಬಳಸೋ ವರ್ಕೆಬಲ್ ಲಾಜಿಕ್ಕು ಇದು. ಇಂತಹದೊಂದು ಲಾಜಿಕ್ಕನ್ನು ಕಳ್ಳಕಾಕರು ಬಳಸಿದರೆ ಏನಾಗಬಹುದು ಎಂಬ ಪ್ರಶ್ನೆ ಕಾಡಿದರೆ ಈ ಕುಣಿಗಲ್ ಗಿರಿ ಕಥೆ ಕೇಳಿ.
ಈ ಕುಣಿಗಲ್ ಗಿರಿ ಮತ್ಯಾರೂ ಅಲ್ಲ. ನನ್ನ ಹೆಸರನ್ನು ಮೋದಿ, ಸಿದ್ದರಾಮಯ್ಯ ಜಪಿಸುವಂತಹ ಕೆಲಸ ಮಾಡುತ್ತೇನೆ ಅಂತ ಘೋಷಿಸಿ ರಾಜಧಾನಿಯಲ್ಲಿ ಸರಣಿ ದರೋಡೆ ಮೂಲಕ ಹಾವಳಿ ಇಟ್ಟಿದ್ದ ದರೋಡೆಕೋರ.
ಈ ದರೋಡೆಕೋರನ ಸ್ಪೆಷಾಲಿಟಿ ಏನೆಂದರೆ ಮನೆಗೆ ನುಗ್ಗಿ ದರೋಡೆ ಮಾಡೋದು. ಆದರೆ, ಮಹಿಳೆಯರು ಹಾಗೂ ವೃದ್ದರ ಮೇಲೆ ಕೈ ಹಾಕುತ್ತಿರಲಿಲ್ಲ. ಇಂತಹ ಕುಣಿಗಲ್ ಗಿರಿ ನಗರದ ವಿಜಯನಗರದಲ್ಲಿ ಮನೆಯೊಂದನ್ನು ದರೋಡೆ ಮಾಡಿ ಹೋಗಿದ್ದನಂತೆ.
ದರೋಡೆ ನಂತರ ಪೊಲೀಸರು ಆ ಮನೆಗೆ ಡಿಸಿಪಿಯಾಗಿದ್ದ ಲಾಬೂರಾಮ್ ಹೋಗಿದ್ದರು. ಆ ದರೋಡೆಕೋರನ ಬಗ್ಗೆ ಮನೆಯವರಿಂದ ಮಾಹಿತಿ ಪಡೆಯುತ್ತಿದ್ದರು. ಆಗ ಮನೆಯ ಅಜ್ಜಿಯೊಂದು ಮುಂದೆ ಬಂದು ಸರ್ ಆ ದರೋಡೆಕೋರ ಬಹಳ ಒಳ್ಳೆಯವನು ಅಂದರಂತೆ. ಶಾಕ್ ಆದ ಲಾಬೂರಾಮ್ ಏಕಜ್ಜಿ ಅಂದರೆ, ದರೋಡೆಕೋರ ಲೂಟಿ ಮಾಡಿ ಮನೆಯಿಂದ ಹೊರಡುವಾಗ ನನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಹೋದ ಎಂದು ನುಡಿದರಂತೆ.
ಇದನ್ನು ಕೇಳಿ ಅಂತಹ ಗಂಭೀರ ಸನ್ನಿವೇಶದಲ್ಲೂ ಪೊಲೀಸರಿಗೆ ನಗು ತಡೆಯಲಾಗಲಿಲ್ಲವಂತೆ!!!
ಹದಿಹರೆಯ ಥೌಸಂಡ್ ವ್ಯಾಟ್ಸ್ ಕರೆಂಟ್ ಇದ್ದಂತೆ....!
ಸದಾ ಬಿಸಿ ಬಿಸಿ ಚರ್ಚೆ, ವಾಗ್ವಾದಗಳೇ ಹೆಚ್ಚಿರುವ ಅಧಿವೇಶನದ ಕಲಾಪವನ್ನು ಸ್ವಲ್ಪ ಕೂಲ್ ಮಾಡುವುದು ತೀರಾ ಅಗತ್ಯವಂತೂ ಇದೆ.
ಹಿರಿಯರ ಮನೆಯ ಹೆಡ್ ಮಾಸ್ಟರ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇತ್ತೀಚಿನ ಕಲಾಪದ ಗುಣಮಟ್ಟದ ಬಗ್ಗೆ ಹಲವು ಬಾರಿ ಬೇಸರ ವ್ಯಕ್ತಪಡಿಸಿದ್ದರೂ ಸಮಯ ಬಂದಾಗ ಸದಸ್ಯರಿಗೆ ಕಟುವಾಗಿ ಎಚ್ಚರಿಕೆ ಕೊಡುವ ಜೊತೆಗೆ ನಗುವಿನ ಪಂಚ್ ಕೊಡುವುದರಲ್ಲಿ ಹಿಂದೆ ಬೀಳಲ್ಲ.
ಇತ್ತೀಚೆಗೆ ಅಧಿವೇಶನದಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು.
ಹದಿಹರೆಯದವರು ಶಾಲಾ ದಿನಗಳಲ್ಲೇ ಡ್ರಗ್ಸ್ ಸೇರಿ ಇನ್ನಿತರ ದುಶ್ಚಟಗಳಿಗೆ ದಾಸರಾಗುವುದು, ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು, ಅಪ್ರಾಪ್ತ ವಯಸ್ಸಲ್ಲಿ ಗರ್ಭಧಾರಣೆ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದರು.ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿಯವರು ಮಾತನಾಡುವಾಗ, ಹುಚ್ಚುಕೋಡಿ ಮನಸ್ಸು ಹದಿನಾರರ ವಯಸ್ಸು. ಅದರಲ್ಲೂ ಹದಿಹರೆಯದ ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಮಡಿಲಿನಲ್ಲಿ ಕೆಂಡ ಇಟ್ಟುಕೊಂಡಂತೆ. ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವ ಬಗ್ಗೆಯೇ ಪಾಲಕರು ಯೋಚಿಸುತ್ತಿರುತ್ತಾರೆ. ಟೀನೇಜ್ ಎನ್ನುವುದು ಥೌಸಂಡ್ ವ್ಯಾಟ್ ಕರೆಂಟ್ ಇದ್ದಂತೆ ಎಂದರು.
ಈ ಮಾತಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಥೌಸಂಡ್ ವ್ಯಾಟ್ ಕರೆಂಟ್ ಹೇಗಿರುತ್ತದೆ?’ ಎಂದರು.
ಕೂಡಲೇ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಹೊರಗೆ ಹೋಗಿ ಮುಟ್ಟಿ ನೋಡಿ ಬಾ, ಗೊತ್ತಾಗುತ್ತದೆ’ ಎಂದು ಕಾಲೆಳೆದರು.
ಮಾತು ಮುಂದುವರೆಸಿದ ಭಾರತಿ ಶೆಟ್ಟಿಯವರು ‘ರವಿಕುಮಾರ್ ಅವರು ಆ ವಯಸ್ಸಿಗೆ ಬಂದಿಲ್ಲ ಎನಿಸುತ್ತೆ’ ಎಂದು ನಗುತ್ತಾ ಚರ್ಚೆ ಮುಂದುವರೆಸಿದರು.
-ಗಿರೀಶ್ ಮಾದೇನಹಳ್ಳಿ
-ಮಂಜುನಾಥ್ ನಾಗಲೀಕರ್