ಸಾರಾಂಶ
ಬೆಂಗಳೂರು : ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಹಳೇ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸದ್ದುಗುಂಟೆಪಾಳ್ಯ ನಿವಾಸಿ ಗಜೇಂದ್ರ ಬಂಧಿತನಾಗಿದ್ದು, ವಿಚಾರಣೆಗೆ ಗೈರಾದ ಆತನ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನಲೆಯಲ್ಲಿ ಗಜೇಂದ್ರನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ಕಳುಹಿಸಿದೆ.
2004ರಲ್ಲಿ ರಾಜಕೀಯ ಗಲಾಟೆ ಹಿನ್ನಲೆಯಲ್ಲಿ ನಡೆದಿದ್ದ ರವಿ ಅಲಿಯಾಸ್ ಕೊತ್ತ ರವಿ ಹತ್ಯೆ ಪ್ರಕರಣ ಸಂಬಂಧ ಗಜೇಂದ್ರ ಸೇರಿದಂತೆ ಎಂಟು ಮಂದಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಆತ ನಾಪತ್ತೆಯಾಗಿದ್ದ. ಇನ್ನು ಇದೇ ಪ್ರಕರಣದಲ್ಲಿ ಸಾಕ್ಷ್ಯ ಕೊರತೆ ಕಾರಣಕ್ಕೆ ಇನ್ನುಳಿದ ಆರೋಪಿಗಳು ದೋಷಾಮುಕ್ತರಾಗಿದ್ದರು. ಆದರೆ ಗೈರಾಗಿದ್ದ ಕಾರಣಕ್ಕೆ ಗಜೇಂದ್ರನ ಮೇಲಿನ ವಿಚಾರಣೆ ಮುಂದುವರೆದಿತ್ತು. ಆತನ ಮೇಲೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು ಎಂದು ನಗರದ ಜಂಟಿ ಆಯುಕ್ತ (ಅಪರಾಧ) ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಗಜೇಂದ್ರ ತಮಿಳುನಾಡಿಗೆ ಪರಾರಿಯಾಗಿದ್ದ. ಅಲ್ಲಿ ಕೆಲವು ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಆತ, ಮೂರು ವರ್ಷಗಳ ಹಿಂದೆ ನಗರಕ್ಕೆ ಮರಳಿ ಸದ್ದುಗುಂಟೆಪಾಳ್ಯದಲ್ಲಿ ನೆಲೆಸಿದ್ದ. ಕನ್ನಡದಲ್ಲಿ ಸಹ ಪುಟಾಣಿ ಪವರ್ ಹೆಸರಿನ ಚಲನಚಿತ್ರ ನಿರ್ದೇಶಿಸಿದ್ದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆ. ತಾಂತ್ರಿಕ ಮಾಹಿತಿ ಆಧರಿಸಿ ಗಜೇಂದ್ರನನ್ನು ಪತ್ತೆ ಹಚ್ಚಲಾಯಿತು ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.