ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ :ಜಿ.ಎಸ್.ಭಾನುಪ್ರಕಾಶ್ ಸೇರಿ ಐವರ ವಿರುದ್ಧ ಎಫ್‌ಐಆರ್..!

| N/A | Published : Apr 19 2025, 12:44 AM IST / Updated: Apr 19 2025, 08:23 AM IST

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ :ಜಿ.ಎಸ್.ಭಾನುಪ್ರಕಾಶ್ ಸೇರಿ ಐವರ ವಿರುದ್ಧ ಎಫ್‌ಐಆರ್..!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ತಾಲೂಕಿನ ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸಿದ್ದೇಗೌಡರ ಪುತ್ರ ಜಿ.ಎಸ್.ಭಾನುಪ್ರಕಾಶ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 ಮಂಡ್ಯ : ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ತಾಲೂಕಿನ ಗೋಪಾಲಪುರ ಗ್ರಾಪಂ ಸದಸ್ಯೆ ಸುಧಾ ಸಿದ್ದೇಗೌಡರ ಪುತ್ರ ಜಿ.ಎಸ್.ಭಾನುಪ್ರಕಾಶ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಜಿ.ಎಸ್. ಭಾನುಪ್ರಕಾಶ್, ಅಭಿಷೇಕ್, ವೆಂಕಟೇಶ್, ಶ್ರೀನಿವಾಸ ಸೇರಿದಂತೆ ಇತರರ ವಿರುದ್ಧ ಪಂಚಾಯಿತಿ ಪಿಡಿಒ ಎಂ.ಕೆ.ಅನಿತಾ ರಾಜೇಶ್ವರಿ ದೂರು ನೀಡಿದ್ದಾರೆ.

ಆಗಿದ್ದೇನು?

ಗೋಪಾಲಪುರ ಗ್ರಾಪಂ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ನಡೆದಿರುವ ಸಿ.ಸಿ.ರಸ್ತೆ, ಚರಂಡಿ ಕಾಮಗಾರಿಗಳು ಕಳಪೆ ಎಂಬ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ತಾಲೂಕು ಯೋಜನಾಧಿಕಾರಿ ವೆಂಕಟರಮಣರಾವ್ ಅವರನ್ನು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು.

ಅದರಂತೆ ತಾಲೂಕು ಯೋಜನಾಧಿಕಾರಿ, ಸಿಬ್ಬಂದಿ, ಪಂಚಾಯ್ತಿ ಕಾರ್ಯದರ್ಶಿ ಅವರೊಂದಿಗೆ ಏ.೧೭ರಂದು ಮಧ್ಯಾಹ್ನ ೧೨.೩೦ಕ್ಕೆ ಗೋಪಾಲಪುರ ಗ್ರಾಮದ ಚಿಕ್ಕಬೋರಪ್ಪನವರ ಮನೆಯ ಬಳಿಗೆ ಸಿ.ಸಿ.ರಸ್ತೆ ಪರಿಶೀಲನೆಗೆ ತೆರಳಿದ್ದ ವೇಳೆ ಸದಸ್ಯೆ ಸುಧಾ ಸಿದ್ದೇಗೌಡರ ಪುತ್ರ ಜಿ.ಎಸ್.ಭಾನುಪ್ರಕಾಶ್, ಅಭಿಷೇಕ್, ವೆಂಕಟೇಶ್, ಶ್ರೀನಿವಾಸ ಸೇರಿದಂತೆ ಇತರರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ಕಾಮಗಾರಿಗಳ ಸಂಬಂಧ ದೂರು ನೀಡಿರುವ ಕೆ.ಆರ್.ರವೀಂದ್ರ ಗ್ರಾಪಂ ವ್ಯಾಪ್ತಿಗೆ ಸೇರದವರಾಗಿದ್ದಾರೆ. ಅವರು ಪರಿಶೀಲನೆಗೆ ಹಾಜರಾಗುವವರೆಗೂ ಪರಿಶೀಲನೆ ಮಾಡಲು ಬಿಡುವುದಿಲ್ಲ ಎಂದು ಸಿ.ಸಿ.ರಸ್ತೆಯ ಪರಿಶೀಲನೆ ಮಾಡಲು ಅವಕಾಶ ನೀಡದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ, ಸಾರ್ವಜನಿಕವಾಗಿ ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳ ಪರಿಶೀಲನೆ ಮಾಡದಂತೆ ತಡೆದು ವಾಪಸ್ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದೇ ದಿನ ಮಧ್ಯಾಹ್ನ 1.15ರ ವೇಳೆಗೆ ಮತ್ತೆ ಅದೇ ಗುಂಪಿನವರು ಗೋಪಾಲಪುರ ಗ್ರಾಪಂ ಕಚೇರಿಗೆ ಬಂದು ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಕೆಂಪಾಚಾರಿ ಹಾಗೂ ಪಂಚಾಯ್ತಿ ಸಿಬ್ಬಂದಿ ಎದುರು ಸಾರ್ವಜನಿಕವಾಗಿ ನಿಂದಿಸಿದ್ದಲ್ಲದೇ, ಇದು ನಮ್ಮ ಗ್ರಾಮ ಪಂಚಾಯ್ತಿ. ಇಲ್ಲಿ ಕೆಲಸ ಮಾಡಲು ನೀವು ಯಾರು. ಕೂಡಲೇ ಎದ್ದು ಹೊರಗೆ ಹೋಗಿ. ಇಲ್ಲದಿದ್ದರೆ ನಿಮ್ಮನ್ನು ಹೊರಗೆ ಹಾಕಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಅವಾಚ್ಯ ಶಬ್ಧಗಳಿಂದ ಬೈಯ್ದು ಗ್ರಾಪಂ ಕೆಲಸಗಳಿಗೆ ಅಡ್ಡಿಪಡಿಸಿದ್ದಾರೆ. ಇವರ ವಿರುದ್ಧ ಕಾ ನೂನು ಕ್ರಮ ಜರುಗಿಸುವಂತೆ ಪಿಡಿಒ ಎಂ.ಕೆ.ಅನಿತಾ ರಾಜೇಶ್ವರಿ ದೂರಿನಲ್ಲಿ ಮನವಿ ಮಾಡಿದ್ದಾರೆ.