ತಾಯಿ- ಮಗಳ ಆತ್ಮಹತ್ಯೆ: ೧೯ ಜನರ ವಿರುದ್ಧ ಎಫ್‌ಐಆರ್

| Published : Mar 15 2025, 01:03 AM IST

ಸಾರಾಂಶ

ಮನನೊಂದ ತಾಯಿ ಕೂಡ ಮಗಳ ಸಾವಿಗೆ ನ್ಯಾಯ ಸಿಗುವುದಿಲ್ಲವೆಂದು ಮನನೊಂದು ನನ್ನ ತಾಯಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದರು ಎಂದು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಲಂ ೧೮೯ (೨), ೧೮೧(೨), ೬೪, ೧೦೮, ೫೪, ೧೧೬(೧) ಅಡಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೆಬ್ಬಕವಾಡಿ ಗ್ರಾಮದ ತಾಯಿ- ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೇರಿ ೧೯ ಜನರ ವಿರುದ್ಧ ಶುಕ್ರವಾರ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹೆಬ್ಬಕವಾಡಿ ಗ್ರಾಮದ ಲಕ್ಷ್ಮೀ (೩೮) ಹಾಗೂ ಈಕೆಯ ಮಗಳು ಎಚ್.ಎನ್.ವಿಜಯಲಕ್ಷ್ಮೀ (೨೧) ಆತ್ಮಹತ್ಯೆಗೆ ಶರಣಾದವರು. ಪ್ರೀತಿಸಿ ವಂಚಿಸಿದನೆನ್ನಲಾದ ಮಾರಸಿಂಗನಹಳ್ಳಿ ಗ್ರಾಮದ ಹರಿಕೃಷ್ಣ, ಆತನ ಚಿಕ್ಕಪ್ಪ ಎಂ.ಟಿ.ನಾಗರಾಜು, ಹೆಂಡತಿ ಗೋಮತಿ, ಶ್ರೀಧರ, ಪುಟ್ಟೇಗೌಡ, ಆತನ ಹೆಂಡತಿ ಶೋಭಾ, ಚಿಕ್ಕತಿಮ್ಮೇಗೌಡ, ಪತ್ನಿ ಪುಷ್ಪ, ನಾಗಣ್ಣ, ಪತ್ನಿ ಗೌರಮ್ಮ, ಹೆಬ್ಬಕವಾಡಿ ಸುಜೇಂದ್ರ, ಪತ್ನಿ ಪವಿತ್ರಾ, ಪ್ರಕಾಶ, ಪತ್ನಿ ಸರಸ್ವತಿ, ಮಂಜು, ಶಿವಶಂಕರ, ಮಾರಸಿಂಗನಹಳ್ಳಿ ನಾಗೇಂದ್ರ ಹಾಗೂ ಹರಿಕೃಷ್ಣನ ತಂದೆ- ತಾಯಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಜ್ಞೆ ತಪ್ಪಿಸಿ ಲೈಂಗಿಕ ಕ್ರಿಯೆ:

ಎಚ್.ಎನ್.ವಿಜಯಲಕ್ಷ್ಮೀ ಹಾಗೂ ಮಾರಸಿಂಗನಹಳ್ಳಿ ಗ್ರಾಮದ ಹರಿಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದರು. ಒಮ್ಮೆ ಮನೆಗೆ ಬಂದು ವಿಜಯಲಕ್ಷ್ಮೀಯನ್ನು ನಾನು ಮದುವೆಯಾಗುತ್ತೇನೆ. ಆಕೆಗೆ ಮೋಸ ಮಾಡುವುದಿಲ್ಲವೆಂದು ನಂಬಿಸಿದ್ದನು. ಆ ಸಲುಗೆಯ ಮೇರೆಗೆ ಇಬ್ಬರೂ ಓಡಾಡಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಒಮ್ಮೆ ವಿಜಯಲಕ್ಷ್ಮೀಯನ್ನು ಬಾಬುರಾಯನಕೊಪ್ಪಲು ಲಾಡ್ಜ್‌ಗೆ ಕರೆದೊಯ್ದ ಹರಿಕೃಷ್ಣ ಆಕೆಗೆ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿದ್ದನು. ಆಕೆಯ ನಗ್ನ ಫೋಟೋಗಳನ್ನು ಇಟ್ಟುಕೊಂಡು ಪದೇ ಪದೇ ಕರೆಸಿಕೊಂಡು ದೈಹಿಕ ಸಂಪರ್ಕ ಮಾಡುತ್ತಿದ್ದನು ಎಂದು ಸಹೋದರ ಮನೋಹರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯಾಗಲು ತಿರಸ್ಕಾರ:

ಕೊನೆಗೆ ವಿಜಯಲಕ್ಷ್ಮೀ ಮದುವೆಯಾಗುವಂತೆ ಹರಿಕೃಷ್ಣನನ್ನು ಕೇಳಿದಾಗ ಆಕೆಯನ್ನು ತಿರಸ್ಕರಿಸಿದ್ದನೆನ್ನಲಾಗಿದೆ. ಇದರಿಂದ ಮನನೊಂದ ವಿಜಯಲಕ್ಷ್ಮೀ ಸ್ನೇಹಿತೆ ಜೊತೆ ಎಲ್ಲಾ ವಿಚಾರಗಳನ್ನು ಹೇಳಿಕೊಂಡಿದ್ದಳು. ಆಗ ಸ್ನೇಹಿತೆ ಹರಿಕೃಷ್ಣ ನಡವಳಿಕೆ ಸರಿಯಿಲ್ಲ. ಅವನು ಇದೇ ರೀತಿ ಮೂರ್ನಾಲ್ಕು ಹುಡುಗಿಯರಿಗೆ ಪ್ರೀತಿಸುವ ನಾಟಕವಾಡಿ ಅವರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಾನೆ ಎಂದಿದ್ದಳು. ವಿಜಯಲಕ್ಷ್ಮೀ ಪ್ರಿಯಕರ ಹರಿಕೃಷ್ಣನಿಗೆ ಪದೇ ಪದೇ ದೂರವಾಣಿ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ಮೆಸೇಜ್ ಕಳುಹಿಸಿದ್ದಳು. ಅದಕ್ಕೂ ಅವನು ಉತ್ತರಿಸಿರಲಿಲ್ಲ. ಫೆ.೨೦ರಂದು ಮತ್ತೆ ಕರೆ ಮಾಡಿದಾಗ ಹರಿಕೃಷ್ಣ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಹೋಗಿ ಸಾಯಿ ಎಂದು ಬೈದು ಫೋನ್ ಕಟ್ ಮಾಡಿದ್ದನು. ಇದರಿಂದ ಮನನೊಂದು ವಿಜಯಲಕ್ಷ್ಮೀ ಫೆ.೨೧ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಲಾಗಿದೆ.

ಹರಿಕೃಷ್ಣ ಕಡೆಯವರಿಂದ ಹಲ್ಲೆ:

ಈ ವಿಚಾರವಾಗಿ ಹರಿಕೃಷ್ಣನಲ್ಲಿ ವಿಚಾರಿಸಲು ಮಾರಸಿಂಗನಹಳ್ಳಿಗೆ ವಿಜಯಲಕ್ಷ್ಮೀ ಮಾವ ಲಕ್ಷ್ಮೀಶ ಮತ್ತು ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು ತೆರಳಿದಾಗ ಹರಿಕೃಷ್ಣ ಕಡೆಯವರು ಸೇರಿ ಕಣ್ಣಿಗೆ ಖಾರದಪುಡಿ ಎರಚಿ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಈ ವಿಚಾರ ಪೊಲೀಸರಿಗೆ ತಿಳಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯ ಕೇಳಲು ಹೋದವರ ವಿರುದ್ಧವೇ ಹರಿಕೃಷ್ಣನ ಅಣ್ಣ ಶಿವಶಂಕರ ಮತ್ತು ಎಂ.ಟಿ.ನಾಗರಾಜು ಪೊಲೀಸರಿಗೆ ದೂರು ನೀಡಿದ್ದರು.

ಇದರಿಂದ ಮನನೊಂದ ತಾಯಿ ಕೂಡ ಮಗಳ ಸಾವಿಗೆ ನ್ಯಾಯ ಸಿಗುವುದಿಲ್ಲವೆಂದು ಮನನೊಂದು ನನ್ನ ತಾಯಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದರು ಎಂದು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಲಂ ೧೮೯ (೨), ೧೮೧(೨), ೬೪, ೧೦೮, ೫೪, ೧೧೬(೧) ಅಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರಿಗೆ ಗ್ರಾಮಸ್ಥರಿಂದ ತರಾಟೆ:

ಮಗಳ ಸಾವಿಗೆ ನ್ಯಾಯ ಸಿಗದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಲಕ್ಷ್ಮೀ ಅವರ ನಿವಾಸದ ಬಳಿಗೆ ಸ್ಥಳ ಪರಿಶೀಲನೆಗೆ ಬಂದ ಪೊಲೀಸರನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಾಗಲೇ ಕೊಟ್ಟ ದೂರನ್ನು ಆಧರಿಸಿ ಕ್ರಮ ವಹಿಸಿದ್ದರೆ ಒಂದು ಜೀವವನ್ನಾದರೂ ಉಳಿಸಬಹುದಿತ್ತು. ಈಗ ಆ ಜೀವವೂ ಹೋದ ಮೇಲೆ ಇಲ್ಲಿಗೆ ಬಂದಿದ್ದೀರಿ. ನ್ಯಾಯಕ್ಕಾಗಿ ನಿಮ್ಮ ಬಳಿಗೆ ಎಷ್ಟು ಬಾರಿ ಅಲೆದರೂ ನಮ್ಮ ನೋವು ನಿಮಗೆ ಅರ್ಥವಾಗಲಿಲ್ಲ. ಆರೋಪಿಗಳ ರಕ್ಷಣೆಗೆ ನಿಂತಿರುವ ಪೊಲೀಸರಿಗೆ ಧಿಕ್ಕಾರ.. ಧಿಕ್ಕಾರ... ಎಂದು ಘೋಷಣೆ ಕೂಗಿದರು.