ಹುಳು ಬಿದ್ದ ಆಹಾರ ಪೂರೈಸಿದ್ದನ್ನು ಪ್ರಶ್ನಿಸಿದ್ದ ಗ್ರಾಹಕನ ಮೇಲೆ 25 ಲಕ್ಷ ರು. ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಅಸತ್ಯದ ಕಳಂಕ ಹೊರಿಸಿದ್ದಾರೆ ಎಂದು ಆರೋಪದಡಿ ದಿ. ರಾಮೇಶ್ವರಂ ಕೆಫೆ ಮಾಲಿಕರ ದಂಪತಿ ವಿರುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ (ಬಿಐಎಎಲ್‌) ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹುಳು ಬಿದ್ದ ಆಹಾರ ಪೂರೈಸಿದ್ದನ್ನು ಪ್ರಶ್ನಿಸಿದ್ದ ಗ್ರಾಹಕನ ಮೇಲೆ 25 ಲಕ್ಷ ರು. ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಅಸತ್ಯದ ಕಳಂಕ ಹೊರಿಸಿದ್ದಾರೆ ಎಂದು ಆರೋಪದಡಿ ದಿ. ರಾಮೇಶ್ವರಂ ಕೆಫೆ ಮಾಲಿಕರ ದಂಪತಿ ವಿರುದ್ಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ (ಬಿಐಎಎಲ್‌) ಪ್ರಕರಣ ದಾಖಲಾಗಿದೆ.

ರಾಮೇಶ್ವರಂ ಕೆಫೆ ಮಾಲಿಕರಾದ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಹಾಗೂ ಕೆಲಸಗಾರ ಬಿ.ಎಲ್‌. ಸುಮತ್ ಅವರಿಗೆ ಸಂಕಷ್ಟ ಎದುರಾಗಿದ್ದು, ಮಾರತ್ತಹಳ್ಳಿಯ ಎನ್‌.ನಿಖಿಲ್ ನೀಡಿದ ದೂರಿನ್ವಯ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆಗಿಳಿದಿರುವ ಪೊಲೀಸರು, ವಿಚಾರಣೆಗಾಗಿ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಲ್ಲಿ ಕೀಟ ಬಿದ್ದಿದ್ದ ಪೊಂಗಲ್‌ ಪೂರೈಸಿದ್ದನ್ನು ಆಕ್ಷೇಪಿಸಿದ್ದ ಖಾಸಗಿ ಕಂಪನಿ ಉದ್ಯೋಗಿ ನಿಖಿಲ್ ಮೇಲೆ ಕೆಫೆ ಮಾಲಿಕರು ಬ್ಲ್ಯಾಕ್‌ ಮೇಲ್ ಆಪಾದನೆ ಮಾಡಿದ್ದರು. ಆದರೆ ತಾವು ಯಾವುದೇ ಬ್ಲ್ಯಾಕ್‌ ಮೇಲೆ ಮಾಡಿರಲಿಲ್ಲ. ಕೆಲಸದ ನಿಮಿತ್ತ ಹೊರ ರಾಜ್ಯಕ್ಕೆ ಹೋಗಿದ್ದಾಗಿ ನಿಖಿಲ್ ಸ್ಪಷ್ಟನೆ ನೀಡಿದ್ದಾರೆ.

ಎಫ್‌ಐಆರ್ ವಿವರ ಹೀಗಿದೆ: ಜು.24 ರಂದು ಬೆಳಗ್ಗೆ ಸುಮಾರು 7.42ರ ವೇಳೆ ನನ್ನ ಸ್ನೇಹಿತರ ಜತೆ ಬೆಂಗಳೂರಿನಿಂದ ಗುವಾಹಟಿಗೆ ಪ್ರಯಾಣಿಸಲು ಕೆಐಎಎಲ್ ವಿಮಾನ ನಿಲ್ದಾಣ ಟರ್ಮಿನಲ್-1ಕ್ಕೆ ಬಂದಿದ್ದೆ. ಆಗ ಉಪಾಹಾರಕ್ಕಾಗಿ ರಾಮೇಶ್ವರಂ ಕಥೆಗೆ ಹೋಗಿ ಪೊಂಗಲ್ ಮತ್ತು ಫಿಲ್ಟರ್ ಕಾಫಿ (ಬಿಲ್ ಸಂಖ್ಯೆ 139689, ಟೋಕನ್ 686) ಆರ್ಡರ್ ಮಾಡಿದ್ದೆ. ಆದರೆ ಆಹಾರದಲ್ಲಿ ಸೂಪರ್ ವರ್ಮ್ (ಕೀಟ) ಕಂಡು ಬಂತು. ಕೂಡಲೇ ಈ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತಿಳಿಸಿದೆ. ಆ ಆಹಾರವನ್ನು ಬದಲಾವಣೆ ಮಾಡಿಕೊಂಡು ಬರುತ್ತೇವೆಂದು ಸಿಬ್ಬಂದಿ ಹೇಳಿದರು. ಆದರೆ ಆಹಾರ ಬದಲಾವಣೆ ನಿರಾಕರಿಸಿದೆ ಎಂದು ನಿಖಿಲ್ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಕೆಫೆಯಲ್ಲಿದ್ದ ಹಲವಾರು ಗ್ರಾಹಕರು ವೀಡಿಯೊ ಮತ್ತು ಫೋಟೋ ತೆಗೆದಿದ್ದರು. ನಂತರ ಯಾವುದೇ ಗಲಾಟೆ ಮಾಡದೇ ಸುಮಾರು 8.45ಕ್ಕೆ ಗುವಾಹಟಿಗೆ ವಿಮಾನದಲ್ಲಿ ಪ್ರಯಾಣಕ್ಕೆ ತೆರಳಿದೆ. ಆದರೆ ಮರು ದಿನ 25 ಲಕ್ಷ ರು. ಗೆ ಬೇಡಿಕೆ ಇಟ್ಟು ರಾಮೇಶ್ವರಂ ಬ್ರ್ಯಾಂಡ್ ಹಾಳು ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ನನ್ನ ವಿರುದ್ಧ ಪೊಲೀಸರಿಗೆ ರಾಮೇಶ್ವರಂ ಕೆಫೆ ಪ್ರತಿನಿಧಿ ಸುಮಂತ್ ದೂರು ನೀಡಿದ್ದರು. ಆದರೆ ಸುಮಂತ್ ಅವರು ಬ್ಲ್ಯಾಕ್‌ಮೇಲ್ ಗೆ ಕರೆ ಮಾಡಿದ ವೇಳೆ ಬೆಳಗ್ಗೆ 10.27ಕ್ಕೆ (24-07-2025) ತಾನು ವಿಮಾನದಲ್ಲಿಯೇ ಇದ್ದೆ. ಈ ಹೇಳಿಕೆಗೆ ಪುರಾವೆಗಳಿವೆ. ಹಾಗೆಯೇ ಉಲ್ಲೇಖಿಸಿದ ಫೋನ್ ಸಂಖ್ಯೆಗಳೊಂದಿಗೂ ತನಗೂ ಯಾವುದೇ ಸಂಪರ್ಕವಿಲ್ಲ. ತಾನು ಯಾವುದೇ ಪರಿಹಾರ, ಮರುಪಾವತಿ ಅಥವಾ ಹಣಕಾಸಿನ ಬೇಡಿಕೆ ಮಾಡಿರುವುದಿಲ್ಲ ಎಂದು ನಿಖಿಲ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಘಟನೆ ನಡೆದ ದಿನದ ರಾಮೇಶ್ವರಂ ಕೆಫೆಯ ಸಂಬಂಧಿತ ಕರೆ ವಿವರಗಳು ಪರಿಶೀಲನೆಗೆ ಒಳಪಡಿಸಿ ತನಿಖೆ ಮಾಡಬೇಕು. ಅಲ್ಲದೆ ಹಿತಕರ ಆಹಾರ ನೀಡಿರುವುದು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಯಾಗಿದೆ. ಸುಳ್ಳು ಆರೋಪ ಮಾಡಿ ತನ್ನ ವೈಯಕ್ತಿಕ ಗೌರವ ಹಾಳು ಮಾಡಿದ್ದಾರೆ. ಇದಕ್ಕಾಗಿ ರಾಮೇಶ್ವರಂ ಕೆಫೆಯ ಮಾಲಿಕರಾದ ರಾಘವೇಂದ್ರ, ದಿವ್ಯಾ ಹಾಗೂ ಪ್ರತಿನಿಧಿ ಸುಮಂತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.