ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲ್‌ಇಡಿ ಸ್ಕ್ರಿನ್‌ಗಳ ಸಂಗ್ರಹಿಸಿದ್ದ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿ ಪಕ್ಕದಲ್ಲಿದ್ದ ಮಹಿಳಾ ಪಿಜಿಗೆ ಹಾಗೂ ನಾಲ್ಕೈದು ಮನೆಗಳಿಗೆ ಹಾನಿಯಾಗಿರುವ ಘಟನೆ ನಂದಿನಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ,ಸಂಭವಿಸಿಲ್ಲ.

ನಂದಿನಿ ಲೇಔಟ್‌ನ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿಯ ಬ್ಲೂಬೆಲ್‌ ಎಲ್ಇಡಿ ಸ್ಕ್ರಿನ್‌ ಗೋದಾಮಿನಲ್ಲಿ ಭಾನುವಾರ ತಡರಾತ್ರಿ 12.30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಬಳಿಕ ಬೆಂಕಿಯು ಜ್ವಾಲೆ ನಾಲ್ಕು ಅಂತಸ್ತಿನ ಮಹಿಳೆಯರ ಪಿಜಿ ಹಾಗೂ ನಾಲ್ಕೈದು ಮನೆಗಳಿಗೆ ಆವರಿಸಿ ಆತಂಕದ ವಾತಾವರಣ ಉಂಟಾಗಿತ್ತು.

ಈ ಗೋದಾಮಿನಲ್ಲಿ ವಿತರಣೆಗಾಗಿ ಬ್ಯಾನರ್‌ಗಳು ಮತ್ತು ಎಲ್‌ಇಡಿ ಸ್ಕ್ರಿನ್‌ಗಳನ್ನು ಸಂಗ್ರಹಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಹತ್ತಿರದ ಪಿಜಿ ಕಟ್ಟಡ ಮತ್ತು ಪಕ್ಕದ ಮನೆಗಳನ್ನು ಆವರಿಸಿತು.

ಕೂದಲೆಳೆ ಅಂತರದಲ್ಲಿ ಮಹಿಳೆಯರು ಪಾರು:


ಪಿಜಿಯಲ್ಲಿ ವಾಸಿಸುತ್ತಿದ್ದ ಸುಮಾರು 50 ಮಹಿಳೆಯರು ಕೂದಲೆಳೆ ಅಂತದರಲ್ಲಿ ಪಾರಾರಿದ್ದಾರೆ. ಪಿಜಿಯಲ್ಲಿದ್ದ ಮಹಿಳೆಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಯಾವುದೇ ಸಾವು-ನೋವು ಸಂಭವಿಸಿಲ್ಲ. ಗೋದಾಮಿನ ಮುಂದೆ ನಿಲ್ಲಿಸಿದ್ದ ಬೈಕ್‌ ಸೇರಿ 2 ವಾಹನಗಳು ಸುಟ್ಟುಹೋಗಿವೆ. ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬಂದು ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ನಂದಿನಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.