ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಟಿ-ಬಿಟಿ ಇಲಾಖೆಯ ಅಡಿಯಲ್ಲಿ ಬರುವ ‘ಬೆಂಗಳೂರು ಬಯೋ ಇನೋವೇಶನ್ ಸೆಂಟರ್’(ಬಿಬಿಸಿ)ನಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನವೇ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.ಎಲೆಕ್ಟ್ರಾನಿಕ್ ಸಿಟಿಯ ಬಿಎಚ್‌ಎಎಲ್ ಜಂಕ್ಷನ್ ಸಮೀಪದ ಬಿಬಿಸಿಯಲ್ಲಿ ಮಂಗಳವಾರ ಮುಂಜಾನೆ ಸುಮಾರು 4.35 ಗಂಟೆಗೆ ಈ ಅವಘಡ ಸಂವಿಸಿದೆ. ಅಗ್ನಿ ಅವಘಡದ ವೇಳೆ ಸೆಂಟರ್‌ನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.ನೆಲಮಹಡಿ ಸೇರಿ 4 ಅಂತಸ್ತಿನ ಬಿಬಿಸಿ ಕಟ್ಟಡದ 2ನೇ ಮಹಡಿಯಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡ ಸೆಕ್ಯೂರಿಟಿಗಳು ಬೆಂಕಿ ಗಮನಿಸಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸರು ಸಹ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.ರಾಸಾಯನಿಕ ದ್ರಾವಣಗಳಿಂದ ಬೆಂಕಿ ಹೆಚ್ಚು:
ಈ ಬಿಬಿಸಿ ಕಟ್ಟಡದ 2ನೇ ಮಹಡಿಯಲ್ಲಿ ವಿವಿಧ ಸ್ಟಾರ್ಟ್‌ಅಪ್ ಕಂಪನಿಗಳ ಸುಮಾರು 12 ಸಂಶೋಧನಾ ಪ್ರಯೋಗಾಲಯಗಳಿದ್ದು, ಇಲ್ಲಿ ಜೀವ ವಿಜ್ಞಾನ, ಆರೋಗ್ಯ, ಔಷಧಿ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ನಡೆಯುತ್ತವೆ. ಈ ಸ್ಥಳದಲ್ಲಿದ್ದ ವಿವಿಧ ರಾಸಾಯನಿಕ ದ್ರಾವಣ, ವಸ್ತುಗಳು, ಉಪಕರಣಗಳು, ಮಾದರಿಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದವು. ಆದ್ದರಿಂದ ಕಾಲ ಕಳೆದಂತೆ ಕಟ್ಟಡದಲ್ಲಿ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ 3 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸತತ 4 ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ.ಬಿಬಿಸಿ ಸೆಂಟರ್‌ನಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಮಿಕಲ್ ರಿಯಾಕ್ಷನ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಬೆಂಕಿ ಅವಘಡದಲ್ಲಿ ಪ್ರಯೋಗಾಲಯದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 152 ಕೋಟಿ ರು. ನಷ್ಟ:ಈ ಬೆಂಕಿ ಅವಘಡದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳ 12 ಪ್ರಯೋಗಾಲಯಗಳಲ್ಲಿ ಸುಮಾರು 110 ಕೋಟಿ ರು. ಮೌಲ್ಯದ ವಸ್ತುಗಳು ಹಾಗೂ ಸುಮಾರು 42 ಕೋಟಿ ರು. ಮೌಲ್ಯದ ಬಿಬಿಸಿ ಆಸ್ತಿಗಳು ಸೇರಿದಂತೆ ಒಟ್ಟು ಸುಮಾರು 152 ಕೋಟಿ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಕೆಮಿಕಲ್ ರಿಯಾಕ್ಷನ್‌ನಿಂದ ಬೆಂಕಿ?
ಬಿಬಿಸಿ ಸೆಂಟರ್‌ನ ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ಪ್ರಯೋಗಾಲಯಗಳಲ್ಲಿ ಯಾವುದೇ ದೊಡ್ಡ ಪ್ರಮಾಣದ ದಹಿಸುವ ರಾಸಾಯನಿಕಗಳನ್ನು ಸಂಗ್ರಹಿಸದಂತೆ ಮತ್ತು ಬಳಸದಂತೆ ಸೂಚಿಸಲಾಗಿತ್ತು. ಆದರೂ ದಹಿಸುವ ರಾಸಾಯನಿಕಗಳನ್ನು ಸಂಗ್ರಹಿಸಿದ್ದರಿಂದ ಕೆಮಿಕಲ್ ರಿಯಾಕ್ಷನ್ ಆಗಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ತನಿಖೆಯಿಂದ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ.