ಸಾರಾಂಶ
ಬೆಂಗಳೂರು : ನಗರದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಸವನಪುರ ಕೆರೆಯಲ್ಲಿ ಕಳೆದೊಂದು ವಾರದಿಂದ ಪ್ರತಿದಿನ ನೂರಾರು ಮೀನುಗಳು ಸತ್ತು ತೇಲುತ್ತಿವೆ. ಕೆರೆಗೆ ಕೊಳಚೆ ನೀರು ಹರಿದುಬರುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ಬಿಬಿಎಂಪಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ನೀರಿನಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗಿ ಮೀನುಗಳು ಸಾಯುತ್ತಿವೆ. ಬೆಳಗ್ಗೆ ವಾಯುವಿಹಾರಕ್ಕೆ ಹೋದ ಸಂದರ್ಭದಲ್ಲಿ ದೊಡ್ಡ ಗಾತ್ರದ ಮೀನುಗಳು ರಾಶಿ ರಾಶಿಯಾಗಿ ಸತ್ತು ತೇಲುತ್ತಿರುವುದು ಕಂಡುಬರುತ್ತಿದೆ. ನೀರು ಮತ್ತಷ್ಟು ಕಲುಷಿತ ಆಗಬಾರದೆಂದು ಕೆಲ ದಿನಗಳಿಂದ ನಾವೇ ಅವನ್ನು ಹೊರತೆಗೆದು ಬಿಸಾಡುತ್ತಿದ್ದೇವೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಪಾದಿಸಿದರು.
ಈ ಬಗ್ಗೆ ಮಾತನಾಡಿದ ಕೆರೆ ಕಾರ್ಯಕರ್ತ ಬಾಲಾಜಿ ರಘೋತ್ತಮ್ ಬಾಲಿ, ಕೆರೆ ಸಮೀಪ ಯುಜಿಡಿ ಲೈನ್ ಬ್ಲಾಕ್ ಆಗಿದೆ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಒಂದು ವಾರದಿಂದ ಮೀನುಗಳು ಸತ್ತು ತೇಲುತ್ತಿರುವುದನ್ನು ನೋಡುತ್ತಿದ್ದೇವೆ. ಹದಿನೈದು ವರ್ಷಗಳಿಂದ ಈ ಕೆರೆ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಮಾದರಿ ಕೆರೆಯಾಗಿ ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದ ತೆರಿಗೆ ಹಣವೂ ವ್ಯರ್ಥವಾಗಿದೆ. ಆದಷ್ಟು ಬೇಗ ಅಧಿಕಾರಿಗಳು ಕೊಳಚೆ ನೀರು ಕೆರೆಗೆ ಹರಿದುಬರುವುದು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.