ಬಾರ್‌ವೊಂದರಲ್ಲಿ ರೌಡಿ ಶೀಟರ್‌ ಮೇಲೆ ಬಿಯರ್‌ ಬಾಟಲ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು   ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಾರ್‌ವೊಂದರಲ್ಲಿ ರೌಡಿ ಶೀಟರ್‌ ಮೇಲೆ ಬಿಯರ್‌ ಬಾಟಲ್‌ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನ ಪವನ್‌, ಧನುಷ್‌, ಗೊಲ್ಲರಹಟ್ಟಿಯ ಸತೀಶ್‌, ಚಿಕ್ಕಮಂಡ್ಯದ ಕಿರಣ್‌ ಹಾಗೂ ಸುಬ್ರಮಣ್ಯಪುರದ ಯಶವಂತ್‌ ಬಂಧಿತರು.

ಆರೋಪಿಗಳು ಏ.27ರಂದು ರಾತ್ರಿ ಸುಮಾರು 11 ಗಂಟೆಗೆ ಚುಂಚಘಟ್ಟ ಮುಖ್ಯ ರಸ್ತೆಯ ಆರ್.ಆರ್‌.ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಕುಮಾರಸ್ವಾಮಿ ಲೇಔಟ್‌ ಠಾಣೆ ರೌಡಿ ಶೀಟರ್‌ ಸುಕೇಶ್‌ ಕುಮಾರ್‌(31) ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಗಾಯಾಳುವಿನ ತಾಯಿ ನೀಡಿದ ದೂರಿನ ಮೇರೆಗೆ ಐವರನ್ನು ಬಂಧಿಸಲಾಗಿದೆ.

ಏನಿದು ಘಟನೆ?:

ಹಲ್ಲೆಗೊಳಗಾದ ಸುಕೇಶ್‌ ಕುಮಾರ್‌ ಮತ್ತು ಆತನ ಸಹೋದರ ವಜ್ರೇಶ್‌ ಕುಮಾರ್‌ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯ ರೌಡಿ ಶೀಟರ್‌ಗಳಾಗಿದ್ದಾರೆ. ಯಲಚೇನಹಳ್ಳಿ ಕಾಶಿನಗರದ ನಿವಾಸಿಗಳಾಗಿರುವ ಈ ಇಬ್ಬರು ಸುಮಾರು 10 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, ಹವಾ ಸೃಷ್ಟಿಸಲು ಕೆಲ ವರ್ಷಗಳ ಹಿಂದೆ ಪವನ್‌ ಮತ್ತು ಧನುಶ್‌ಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಇವರ ಕಾಟ ತಳಲಾರದೆ ಇಬ್ಬರೂ ಮನೆ ಖಾಲಿ ಮಾಡಿಕೊಂಡು ಬೇರೆ ಏರಿಯಾದಲ್ಲಿ ನೆಲೆಸಿದ್ದರು. ಹೀಗಾಗಿ ರೌಡಿ ಸಹೋದರರ ವಿರುದ್ಧ ಪವನ್‌ ಗುಂಪು 2017ರಿಂದಲೂ ದ್ವೇಷ ಸಾಧಿಸುತ್ತಿತ್ತು.

ಏ.27ರಂದು ರಾತ್ರಿ ಸುಮಾರು 11 ಗಂಟೆಗೆ ರೌಡಿ ಸುಕೇಶ್‌ ಮತ್ತು ಆತನ ಸ್ನೇಹಿತ ಕಿರಣ್‌ ಚುಂಚಘಟ್ಟ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದರು. ಇದೇ ಸಮಯಕ್ಕೆ ಪವನ್‌ ಹಾಗೂ ಆತನ ಸಹಚರರು ಬೇರೊಬ್ಬ ವ್ಯಕ್ತಿಯ ಭೇಟಿಗಾಗಿ ಬಾರ್‌ಗೆ ಬಂದಿದ್ದರು. ಈ ವೇಳೆ ಸುಕೇಶ್‌ ಮೇಲೆ ಬಿಯರ್‌ ಬಾಟಲಿಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.