ಸಾರಾಂಶ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಅವರ ಮಾಜಿ ಕಾರು ಚಾಲಕ ಸೇರಿದಂತೆ ಇಬ್ಬರನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಕೇಶವ್ ಪಾಟೀಲ್ ಹಾಗೂ ಆತನ ಸ್ನೇಹಿತ ನಿತಿನ್ ಉತ್ತಮ್ ಕಾಳೆ ಬಂಧಿತರಾಗಿದ್ದು, ಆರೋಪಿಗಳಿಂದ 1.5 ಕೇಜಿ ಚಿನ್ನಾಭರಣ ಹಾಗೂ ವಜ್ರ ಸೇರಿ 1.22 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಚಾಮರಾಜಪೇಟೆ ನಿವಾಸಿ ಬಿಲ್ಡರ್ ಸಂದೀಪ್ ಕೆಲ ದಿನಗಳ ಹಿಂದೆ ತಮ್ಮ ಕುಟುಂಬ ಸಮೇತ ಹೊರ ಹೋಗಿದ್ದಾಗ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮಾಜಿ ಕಾರು ಚಾಲಕ ಕೇಶವ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿ ಕರೆತಂದಿದ್ದಾರೆ.
ಸಂದೀಪ್ ಅವರು, ವ್ಯವಹಾರದ ನಿಮಿತ್ತ ಕೇರಳಕ್ಕೆ ತೆರಳಿದ್ದರು. ಅದೇ ದಿನ ನಗರದಲ್ಲಿರುವ ತವರು ಮನೆಗೆ ಅವರ ಪತ್ನಿ ಹೋಗಿದ್ದರು. ಆಗ ಮನೆ ಬೀಗ ಮುರಿದು ವಜ್ರ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮರುದಿನ ಮನೆಗೆ ಸಂದೀಪ್ ಕುಟುಂಬ ಮರಳಿದಾಗ ಕೃತ್ಯ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಸಂದೀಪ್ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್ ಟಿ.ಎಂ.ಧರ್ಮೇಂದ್ರ ನೇತೃತ್ವದ ತಂಡ, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ಹಾಗೂ ಸಂದೀಪ್ ಅವರ ಕೆಲಸಗಾರರು, ಸ್ನೇಹಿತರ ಕುರಿತು ಮಾಹಿತಿ ಸಂಗ್ರಹಿಸಿದಾಗ ಮಾಜಿ ಚಾಲಕ ಕೇಶವ್ ಪಟೇಲ್ ಮೇಲೆ ಅನುಮಾನ ಮೂಡಿದೆ. ಈ ಶಂಕೆ ಮೇರೆಗೆ ಆತನ ಕುರಿತು ಬಗ್ಗೆ ಮತ್ತಷ್ಟು ಮಾಹಿತಿ ಕೆದಕಿದಾಗ ಆರೋಪಿಗಳ ಜಾಡು ಸಿಕ್ಕಿದೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ ಗೋದಂಲಿ ಗ್ರಾಮದಲ್ಲಿ ಕೇಶವ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನ ಮಾಹಿತಿ ಮೇರೆಗೆ ಉತ್ತಮ್ ಸಿಕ್ಕಿಬಿದ್ದಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ಜಕ್ಕೂರಿನಲ್ಲಿ ತನ್ನ ಅಕ್ಕನ ಮನೆಯಲ್ಲಿ ನಿತಿನ್ ಅಡಗಿಸಿಟ್ಟಿದ್ದ 55 ಲಕ್ಷ ರು. ಮೌಲ್ಯದ 653 ಗ್ರಾಂ ಚಿನ್ನಾಭರಣ ಹಾಗೂ ವಜ್ರ ಆಭರಣ ಜಪ್ತಿ ಮಾಡಲಾಯಿತು. ಅದೇ ರೀತಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿರುವ ಆತನ ಅಕ್ಕನ ಮನೆ ಹಾಗೂ ಕೊಲ್ಲಾಪುರದಲ್ಲಿನ ಸೊಂಡೊಲಿ ಗ್ರಾಮದ ಸ್ನೇಹಿತನ ಮನೆಯಲ್ಲಿ ಕೇಶವ್ ಇಟ್ಟಿದ್ದ 28.30 ಲಕ್ಷ ರು ಮೌಲ್ಯದ 354 ಗ್ರಾಂ ಆಭರಣ ವಶಪಡಿಸಿಕೊಳ್ಳಲಾಯಿತು.
ನಿತಿನ್ ಭಾವ ಆತ್ಮಹತ್ಯೆ: ಉದ್ಯಮಿ ಸಂದೀಪ್ ಮನೆಯಲ್ಲಿ ಕದ್ದ ಆಭರಣವನ್ನು ಜಕ್ಕೂರಿನಲ್ಲಿದ್ದ ತಮ್ಮ ಮನೆಯಲ್ಲಿ ಭಾಮೈದ ಅಡಗಿಸಿಟ್ಟಿದ್ದರಿಂದ ಅವಮಾನಿತರಾಗಿ ನಿತಿನ್ ಭಾವ ಮೋಹನ್ ರಾಜ್ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆ ಕಳ್ಳತನ ಕೃತ್ಯಕ್ಕೆ ಭಾಮೈದನಿಗೆ ಸಹಕರಿಸಿದ್ದರು ಎಂದು ಕೆಲವರು ಟೀಕಿಸಿದ್ದರಿಂದ ಬೇಸರಗೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದರು.