ಸಾರಾಂಶ
ಬೆಂಗಳೂರು : ರಾಜಸ್ಥಾನ ಮೂಲದ ಕುಖ್ಯಾತ ಭೂಗತ ಜಗತ್ತಿನ ಪಾತಕಿ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಹೂವಿನ ವ್ಯಾಪಾರಿಗೆ ಬೆದರಿಸಿ ಸುಲಿಗೆಗೆ ಯತ್ನಿಸಿದ್ದ ನಾಲ್ವರನ್ನು ಸಿಸಿಬಿ ಹಾಗೂ ಕೇಂದ್ರ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಶಿಶುಪಾಲ್ ಸಿಂಗ್, ವನ್ಷ್ ಸಚದೇವ್, ಅಮಿತ್ ಚೌಧರಿ ಹಾಗೂ ಮಾವಳ್ಳಿಯ ಮಹಮ್ಮದ್ ರಫೀಕ್ ಬಂಧಿತರು. ಇತ್ತೀಚೆಗೆ ಶೇಷಾದ್ರಿಪುರದ ಹೂವಿನ ವ್ಯಾಪಾರಿಗೆ ಬೆದರಿಸಿ ಒಂದು ಕೋಟಿ ರು.ಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಎಲೆಕ್ಟ್ರಿಕ್ ವಸ್ತುಗಳ ಮಾರಾಟದಲ್ಲಿ ಮಾವಳ್ಳಿಯ ರಫೀಕ್ ತೊಡಗಿದ್ದ. ಆದರೆ ಕೊರೋನಾ ಕಾಲದಲ್ಲಿ ಆತನಿಗೆ ವ್ಯಾಪಾರ ನಷ್ಟವಾಗಿ ಸಂಕಷ್ಟ ಎದುರಾಗಿತ್ತು. ಹಲವು ವರ್ಷಗಳಿಂದ ಹೂವಿನ ವ್ಯಾಪಾರಿ ಜತೆ ರಫೀಕ್‌ಗೆ ಪರಿಚಯವಿದ್ದು, ಪಾಲುದಾರಿಕೆಯಲ್ಲಿ ಭೂವ್ಯವಹಾರ ವ್ಯವಹಾರ ಸಹ ಮಾಡಿದ್ದರು. ಆದರೆ ತನಗೆ ಆರ್ಥಿಕ ನಷ್ಟವಾಗಲು ಸ್ನೇಹಿತ ಹೂವಿನ ವ್ಯಾಪಾರಿಯೇ ಕಾರಣವಾಗಿದ್ದಾನೆ ಎಂದು ಹೂವಿನ ವ್ಯಾಪಾರಿ ಮೇಲೆ ರಫೀಕ್ ಹಗೆತನ ಸಾಧಿಸುತ್ತಿದ್ದ. ದೂರುದಾರ ವ್ಯಾಪಾರಿಯಿಂದ ಎಂದು ಪೊಲೀಸರು ಹೇಳಿದ್ದಾರೆ.
ಹೀಗಿರುವಾಗ ದೆಹಲಿಯ ಗೆಳೆಯನ ಮೂಲಕ ಆತನಿಗೆ ಉತ್ತರಪ್ರದೇಶದ ದರೋಡೆಕೋರ ಅಮಿತ್ ಗ್ಯಾಂಗ್ ಪರಿಚಯವಾಗಿತ್ತು. ಈ ಗೆಳೆತನದಲ್ಲಿ ಏನಾದರೂ ಕೆಲಸವಿದ್ದರೆ ಹೇಳಿ ಮಾಡಿಕೊಡುತ್ತೇವೆ ಎಂದು ರಫೀಕ್‌ಗೆ ಅಮಿತ್ ಹೇಳಿದ್ದ. ಆಗ ಹೂವಿನ ವ್ಯಾಪಾರಿ ಕುರಿತು ಮಾಹಿತಿ ನೀಡಿ ಹಣ ಸುಲಿಗೆಗೆ ಅಮಿತ್ ಸಿಂಗ್‌ಗೆ ರಫೀಕ್ ತಿಳಿಸಿದ್ದ. ಅಂತೆಯೇ ಕೆಲ ದಿನಗಳ ಹಿಂದೆ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಶೇಷಾದ್ರಿಪುರದ ಹೂವಿನ ವ್ಯಾಪಾರಿಗೆ ಕರೆ ಮಾಡಿ 1 ಕೋಟಿ ರು.ಗೆ ಅಮಿತ್ ಗ್ಯಾಂಗ್ ಬೇಡಿಕೆ ಇಟ್ಟಿತ್ತು. ಈ ಕರೆಗಳ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು, ಕೂಡಲೇ ಶೇಷಾದ್ರಿಪುರ ಠಾಣೆಗೆ ದೂರು ಸಲ್ಲಿಸಿದ್ದರು. ಕೊನೆಗೆ ತನಿಖೆ ನಡೆಸಿದಾಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಪಾತ್ರವಿಲ್ಲ ಎಂಬುದು ಖಚಿತವಾಯಿತು. ಬಳಿಕ ಮೊಬೈಲ್ ಕರೆಗಳ ಜಾಡು ಹಿಡಿದಾಗ ಉತ್ತರ ಪ್ರದೇಶದ ಗ್ಯಾಂಗ್ ಸಿಕ್ಕಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಸಲು ಬಿಷ್ಣೋಯಿ ಹೆಸರು!:
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಗೂ ಪಂಜಾಬ್ ಗಾಯಕ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಹೆಸರು ಕೇಳಿ ಬಂದಿತ್ತು. ಅಲ್ಲದೆ ಉತ್ತರ ಭಾರತದಲ್ಲಿ ದರೋಡೆ ಹಾಗೂ ಸುಲಿಗೆಗೆ ಬಿಷ್ಣೋಯಿ ಗ್ಯಾಂಗ್ ಕುಖ್ಯಾತಿ ಪಡೆದಿದೆ. ಹೀಗಾಗಿ ಶೇಷಾದ್ರಿಪುರದ ವ್ಯಾಪಾರಿಗೆ ತಮ್ಮ ಹೆಸರಿನಿಂದ ಕರೆ ಮಾಡಿದರೆ ಆತ ಬೆದರುವುದಿಲ್ಲ ಎಂದು ತಿಳಿದು ಬಿಷ್ಣೋಯಿ ಹೆಸರಿನಲ್ಲಿ ಅಮಿತ್ ಗ್ಯಾಂಗ್ ಕರೆ ಮಾಡಿತ್ತು ಎಂದು ಪೊಲೀಸರು ಹೇಳಿದ್ದಾರೆ.
-ಕೆಲ ದಿನಗಳ ಹಿಂದೆ ಬಿಷ್ಣೋಯಿ ಹೆಸರಲ್ಲಿ ಕೋಟಿ ರು. ವ್ಯಾಪಾರಿಗೆ ಕರೆ ಬಂದಿತ್ತು-ಈ ಕರೆ ಹಿನ್ನೆಲೆಯಲ್ಲಿ ಆತಂಕಗೊಂಡ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದರು-ತನಿಖೆಗಿಳಿದ ಪೊಲೀಸರಿಗೆ ಬಿಷ್ಣೋಯಿ ಗ್ಯಾಂಗ್ ಕೈವಾಡ ಇಲ್ಲದಿರುವುದು ಖಚಿತ -ಬಳಿಕ ಮೊಬೈಲ್ ಕರೆಗಳ ಜಾಡು ಹಿಡಿದಾಗ ಉತ್ತರ ಪ್ರದೇಶದ ಗ್ಯಾಂಗ್ ಸಿಕ್ಕಿ ಬಿತ್ತು-ಬಂಧಿತ ಮಾವಳ್ಳಿಯ ರಫೀಕ್ ಎಲೆಕ್ಟ್ರಿಕ್ ವಸ್ತುಗಳ ವ್ಯಾಪಾರಿ. ಕೊರೋನಾ ವೇಳೆ ನಷ್ಟ ಅನುಭವಿಸಿದ್ದ -ಇದಕ್ಕೆ ಪಾಲುದಾರನಾದ ಗೆಳೆಯ ವ್ಯಾಪಾರಿಯೇ ಕಾರಣ ಎಂದು ರಫೀಕ್ ಹಗೆ ಸಾಧಿಸುತ್ತಿದ್ದ