ಸಾರಾಂಶ
ನಗರದ ಪ್ರತಿಷ್ಠಿತ ಬಟ್ಟೆ ಷೋ ರೂಮ್‌ವೊಂದರಲ್ಲಿ ₹31 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ನಗರದ ಪ್ರತಿಷ್ಠಿತ ಬಟ್ಟೆ ಷೋ ರೂಮ್‌ವೊಂದರಲ್ಲಿ ₹31 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಚಾರ್ಟೆಡ್ ಅಕೌಂಟೆಂಟ್(ಸಿಎ) ವ್ಯಾಸಂಗ ಮಾಡುತ್ತಿರುವ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ರಶ್ಮಿ (25) ಬಂಧಿತೆ. ಈಕೆ ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ನ ವಸಿಷ್ಠ ಬಾಟಿಕ್ ಎಂಬ ಬಟ್ಟೆ ಷೋ ರೂಮ್‌ನಲ್ಲಿ ಇತ್ತೀಚೆಗೆ 31,800 ರು. ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಳು. ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದಳು. ಈ ಸಂಬಂಧ ಷೋ ರೂಮ್‌ನ ಸಿಬ್ಬಂದಿ ಸಂಪದ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಆರೋಪಿ ರಶ್ಮಿ ಗ್ರಾಹಕರ ಸೋಗಿನಲ್ಲಿ ಅ.29ರ ಮಧ್ಯಾಹ್ನ ಬಟ್ಟೆ ಷೋ ರೂಮ್‌ಗೆ ಬಂದಿದ್ದು, 31,800 ರು. ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾಳೆ. ಬಳಿಕ ಸ್ನೇಹಾ ಎಂಬ ಹೆಸರಿನಲ್ಲಿ ಬಿಲ್ ಮಾಡಿಸಿದ್ದಾಳೆ. ಆನ್‌ಲೈನ್‌ನಲ್ಲಿ ಹಣ ಪಾವತಿಸುವುದಾಗಿ ತನ್ನ ಮೊಬೈಲ್‌ನಿಂದ ಷೋ ರೂಮ್‌ನ ಫೋನ್ ಪೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಯಾಗಿದೆ ಎಂದಿದ್ದಾಳೆ. ಆದರೆ, ಷೋ ರೂಮ್‌ನ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಿರಲಿಲ್ಲ.
ಮೊಬೈಲ್ ನಂಬರ್ ಪಡೆದ ಸಿಬ್ಬಂದಿ: ಈ ವೇಳೆ ಸಿಬ್ಬಂದಿ ಸಂಪದ ಅವರು ಹಣ ಪಾವತಿಯಾಗಿಲ್ಲ ಎಂದಿದ್ದಾರೆ. ಈ ವೇಳೆ ರಶ್ಮೀ ಹಣ ಪಾವತಿಯಾಗಿದೆ ಎಂದು ಮೊಬೈಲ್‌ನಲ್ಲಿ ಫೋಟೋ ತೋರಿಸಿದ್ದಾಳೆ. ಆದರೆ, ಷೋ ರೂಮ್‌ನ ಖಾತೆಗೆ ಹಣ ಸಂದಾಯವಾಗಿಲ್ಲ. ಈ ವೇಳೆ ಸಿಬ್ಬಂದಿ ಸಂಪದ, ಷೋ ರೂಮ್‌ನ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಗ ಮಾಲೀಕರು ಖಾತೆಗೆ ತಡವಾಗಿ ಹಣ ಸಂದಾಯವಾಗಬಹುದು. ಗ್ರಾಹಕರ ಮೊಬೈಲ್ ಸಂಖ್ಯೆ ಪಡೆದು ಕಳುಹಿಸಿಕೊಡುವಂತೆ ಹೇಳಿದ್ದಾರೆ. ಅದರಂತೆ ಸಿಬ್ಬಂದಿ ಸಂಪದ, ರಶ್ಮಿಯಿಂದ ಮೊಬೈಲ್ ಸಂಖ್ಯೆ ಪಡೆದು ಬಳಿಕ ತೆರಳಲು ಸೂಚಿಸಿದ್ದಾರೆ.
ಕರೆ ಸ್ವೀಕರಿಸಿ ರಾಂಗ್ ನಂಬರ್ ಎಂದ!:
ಬಳಿಕ ಎಷ್ಟು ಹೊತ್ತು ಕಳೆದರೂ ಷೋ ರೂಮ್‌ನ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿಲ್ಲ. ಬಳಿಕ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಮಾರನೇ ದಿನ ಮತ್ತೆ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಅಪರಿಚಿತ ಪುರುಷ ಕರೆ ಸ್ವೀಕರಿಸಿ, ರಾಂಗ್ ನಂಬರ್ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ವಂಚನೆ ಹೇಗೆ?: ಆರೋಪಿ ರಶ್ಮೀ ನಗರದ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಜತೆಗೆ ಚಾರ್ಟೆಡ್ ಅಕೌಂಟೆಂಟ್(ಸಿಎ) ವ್ಯಾಸಂಗ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿ ರಶ್ಮಿ 2 ಬ್ಯಾಂಕ್ ಖಾತೆ ಹೊಂದಿದ್ದಾಳೆ. ಬಟ್ಟೆ ಖರೀದಿ ಬಳಿಕ ಕ್ಯೂಆರ್ ಕೋಡ್ ಸ್ಕ್ಯಾನರ್ ಮೇಲೆ ಬರೆದಿರುವ ಅಂಗಡಿ ಹೆಸರು ಗಮನಿಸಿದ್ದಾಳೆ. ಈ ವೇಳೆ ತನ್ನದೇ ಮೊಬೈಲ್ ಸಂಖ್ಯೆಯನ್ನು ಅಂಗಡಿ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದಾಳೆ. ಬಳಿಕ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದಂತೆ ಮಾಡಿ ತನ್ನದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾಳೆ. ಇದರ ಫೋಟೋವನ್ನೇ ಹಣ ಪಾವತಿಯಾಗಿದೆ ಎಂದು ಅಂಗಡಿ ಸಿಬ್ಬಂದಿಗೆ ತೋರಿಸಿ ಯಾಮಾರಿಸಿದ್ದಾಳೆ.