ಸಿಐಡಿ ಮಹಿಳಾ ಅಧಿಕಾರಿಯ ವಿರುದ್ಧ ಮತ್ತೆ ವಂಚನೆ ಕೇಸ್‌

| Published : Jun 24 2024, 01:33 AM IST / Updated: Jun 24 2024, 03:46 AM IST

CID

ಸಾರಾಂಶ

ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ ಸಂಬಂಧ ರಾಜ್ಯ ಅಪರಾಧ ತನಿಖಾ ದಳದ(ಸಿಐಡಿ) ಅಧಿಕಾರಿ ಅನಿತಾ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ ಸಂಬಂಧ ರಾಜ್ಯ ಅಪರಾಧ ತನಿಖಾ ದಳದ(ಸಿಐಡಿ) ಅಧಿಕಾರಿ ಅನಿತಾ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ತಮ್ಮ ಪುತ್ರನಿಗೆ ಲೋಕೋಪಯೋಗಿ ಇಲಾಖೆಯ ಉದ್ಯೋಗ ಕೊಡಿಸುವುದಾಗಿ ಧಾರವಾಡದ ಸರೋಜಾ ಅವರಿಂದ ಹಣ ಪಡೆದು ಬಿ.ಎನ್‌. ಅನಿತಾ ಮೋಸ ಮಾಡಿರುವುದಾಗಿ ಹೈಗ್ರೌಂಡ್ಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು ಅನಿತಾ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದೆ ಪಿಡಬ್ಲ್ಯುಡಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಚಿಕ್ಕಮಗಳೂರಿನ ಸುನೀಲ್‌ ಎಂಬಾತನಿಂದ ₹40 ಲಕ್ಷ ಪಡೆದು ವಂಚನೆ ಪ್ರಕರಣ ಸಂಬಂಧ ಅನಿತಾ ಹಾಗೂ ಅವರ ಸಹಚರನನ್ನು ಬಂಧಿಸಿ ವಿಜಯನಗರ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದ ಅ‍ವರಿಗೆ ಮತ್ತೆ ಬಂಧನ ಭೀತಿ ಶುರುವಾಗಿದೆ.

ಏನಿದು ಪ್ರಕರಣ:

2023ನೇ ಸಾಲಿನ ಆದಾಯ ತೆರಿಗೆ ಇನ್‌ಸ್ಪೆಕ್ಟರ್ ಹುದ್ದೆ ನೇಮಕಾತಿಗೆ ಸರೋಜಾ ಅವರ ಪುತ್ರ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಆಗ ಅವರಿಗೆ ಸತ್ಯನಾರಾಯಣ ಹೊನ್ನಿಹಳ್ಳಿ ಮೂಲಕ ಸಿಐಡಿ ಅಧಿಕಾರಿ ಅನಿತಾ ಪರಿಚಯವಾಗಿತ್ತು. ದೂರುದಾರರಿಗೆ ಕರೆ ಮಾಡಿದ ಅನಿತಾ, ನಿಮ್ಮ ಮಗನಿಗೆ ನೌಕರಿ ಕೊಡಿಸುತ್ತೇನೆ. ನನಗೆ ಗಣ್ಯ ವ್ಯಕ್ತಿಗಳು ಪರಿಚಯ ಇದ್ದಾರೆ ಎಂದು ಭರವಸೆ ನೀಡಿದ್ದರು. ಈ ಮಾತು ನಂಬಿದ ಸರೋಜಾ, ಸಿಐಡಿ ಕಚೇರಿಗೆ ಹೋಗಿ ಅನಿತಾ ಭೇಟಿ ಮಾಡಿ ಕೆಲಸದ ವಿಚಾರವಾಗಿ ಚರ್ಚೆ ನಡೆಸಿದಾಗ ₹50 ಲಕ್ಷ ಕೊಡಬೇಕೆಂದು ಹೇಳಿದ್ದರು. ಕೊನೆಗೆ ಈ ಡೀಲ್‌ ಒಪ್ಪಿ ಅವರು ₹30 ಲಕ್ಷ ಕೊಟ್ಟಿದ್ದರು. ಈ ಹಣ ಸಂದಾಯವಾದ ಬಳಿಕ ಆರೋಪಿಗಳ ಮೋಸದ ಮುಖ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.