ಬೆಂಗಳೂರು : ವೈದ್ಯೆಗೆ ಬರೋಬ್ಬರಿ ₹9.60 ಲಕ್ಷ ವಂಚನೆ

| Published : May 02 2024, 01:35 AM IST / Updated: May 02 2024, 05:01 AM IST

ಸಾರಾಂಶ

ಒಎಲ್‌ಎಕ್ಸ್‌ನಲ್ಲಿ ಫರ್ನಿಚರ್‌ ಮಾರಾಟಕ್ಕೆ ಇಟ್ಟಿದ್ದ ವೈದ್ಯೆಗೆ 9.60 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ವಸ್ತು ಖರೀದಿ ನೆಪದಲ್ಲಿ ಕ್ಯೂಆರ್‌ ಕೋಡ್‌ ಪಡೆದು ಮೋಸ ಮಾಡಿದ್ಧಾರೆ.

 ಬೆಂಗಳೂರು :  ‘ಒಎಲ್‌ಎಕ್ಸ್‌’ ಆ್ಯಪ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿ ನೆಪದಲ್ಲಿ ದುಷ್ಕರ್ಮಿಯೊಬ್ಬ ಹಣ ಪಾವತಿಸುವುದಾಗಿ ವೈದ್ಯೆಯ ಬ್ಯಾಂಕ್‌ ಖಾತೆಯಿಂದ ₹9.60 ಲಕ್ಷ ಎಗರಿಸಿರುವ ಆರೋಪದಡಿ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಣ ಕಳೆದುಕೊಂಡ ವಸಂತನಗರ ನಿವಾಸಿ ನೀತಿ ಮಥುರ್‌ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಶೋಕ ಕುಮಾರ್‌ ಎಂಬಾತನ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್‌ ದಾಖಲಿಸಿ ಆತನ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಏನಿದು ಪ್ರಕರಣ?:

ವೃತ್ತಿಯಲ್ಲಿ ವೈದ್ಯೆಯಾಗಿರುವ ನೀತಿ ಮಥುರ್‌ ಅವರು ‘ಒಎಲ್‌ಎಕ್ಸ್‌’ ಆ್ಯಪ್‌ನಲ್ಲಿ ತಮ್ಮ ಗೃಹೋಪಯೋಗಿ ವಸ್ತುಗಳನ್ನು ಮಾರಾಟಕ್ಕೆ ಇರಿಸಿದ್ದರು. ಈ ಸಂಬಂಧ ಅಶೋಕಕುಮಾರ್‌ ಎಂಬಾತ ಏ.24ರಂದು ಸಂಜೆ ವಾಟ್ಸಾಪ್‌ನಲ್ಲಿ ನೀತಿ ಅವರನ್ನು ಸಂಪರ್ಕಿಸಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇಚ್ಛಿಸಿರುವುದಾಗಿ ಸಂದೇಶ ಕಳುಹಿಸಿದ್ದಾನೆ. ಬಳಿಕ ಮುಂಗಡವಾಗಿ ಹಣ ಪಾವತಿಸಲು ಕ್ಯೂರ್‌ಆರ್‌ ಕೋಡ್‌ ಕಳುಹಿಸುವಂತೆ ಕೇಳಿದ್ದಾನೆ. ಅದರಂತೆ ನೀತಿ ಕ್ಯೂಆರ್‌ ಕೋಡ್‌ ಕಳುಹಿಸಿದ್ದಾರೆ.ಆನ್‌ಲೈನ್‌ ಪಾವತಿಯ ಸೋಗಿನಲ್ಲಿ ಹಣ ಎಗರಿಸಿದ

ಕ್ಯೂಆರ್‌ ಕೋಡ್‌ ಬಳಸಿಕೊಂಡು ದುಷ್ಕರ್ಮಿ, ನೀತಿ ಅವರ ಬ್ಯಾಂಕ್‌ ಖಾತೆಯಲ್ಲಿ ತಲಾ ₹22 ಸಾವಿರದಂತೆ ಮೂರು ಬಾರಿ ಒಟ್ಟು ₹66 ಸಾವಿರ ಎಗರಿಸಿದ್ದಾನೆ. ಬಳಿಕ ನೀವು ಕಳುಹಿಸಿರುವ ಕ್ಯೂಆರ್‌ ಕೋರ್ಡ್‌ ಸರಿಯಿಲ್ಲ ಎಂದಿದ್ದು, ನೆಟ್‌ ಬ್ಯಾಂಕ್‌ ಆ್ಯಪ್‌ನಿಂದ ಹಣ ಪಾವತಿಸುವುದಾಗಿ ಹೇಳಿ ನೀತಿ ಅವರಿಂದ ನೆಟ್‌ ಬ್ಯಾಂಕ್‌ ಖಾತೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾನೆ. ಈ ವೇಳೆ ನೀತಿ ಅವರ ನೆಟ್‌ ಬ್ಯಾಂಕ್‌ ಖಾತೆಯಿಂದ ₹22 ಬಾರಿ ಒಟ್ಟು ಬರೋಬ್ಬರಿ ₹8.94 ಲಕ್ಷ ಎಗರಿಸಿದ್ದಾನೆ.

ಕೆಲ ಸಮಯದ ಬಳಿಕ ನೀತಿ ಅವರ ಮೊಬೈಲ್‌ಗೆ ಹಣ ಕಡಿತದ ಬಗ್ಗೆ ಸಂದೇಶ ಬಂದಿದೆ. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.