ಅಮೆರಿಕನ್‌ ಏರೋಸ್ಪೇಸ್‌ ಕಂಪನಿಯಲ್ಲಿ ಮೆಂಬರ್‌ಶಿಪ್‌ ಹೆಸರಲ್ಲಿ ₹77 ಲಕ್ಷ ಪಡೆದು ವಂಚನೆ

| N/A | Published : Apr 13 2025, 02:07 AM IST / Updated: Apr 13 2025, 04:21 AM IST

Money

ಸಾರಾಂಶ

ಅಮೆರಿಕನ್‌ ಏರೋಸ್ಪೇಸ್‌ ಹೆಸರಿನ ಕಂಪನಿಯಲ್ಲಿ ಮೆಂಬರ್‌ಶಿಪ್‌ ತೆಗೆದುಕೊಂಡರೆ ಅಧಿಕ ಲಾಭ ಬರುತ್ತದೆಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹77.24 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು : ಅಮೆರಿಕನ್‌ ಏರೋಸ್ಪೇಸ್‌ ಹೆಸರಿನ ಕಂಪನಿಯಲ್ಲಿ ಮೆಂಬರ್‌ಶಿಪ್‌ ತೆಗೆದುಕೊಂಡರೆ ಅಧಿಕ ಲಾಭ ಬರುತ್ತದೆಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹77.24 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡಬಳ್ಳಾಪುರ ಶ್ರೀನಗರ ನಿವಾಸಿ ಬಿ.ಶಿವಕುಮಾರ್‌ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ವೈ.ಮೂರ್ತಿ ಮತ್ತು ಅಭಿನಯ ರೆಡ್ಡಿ ಎಂಬುವವರ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:ದೂರುದಾರ ಬಿ.ಶಿವಕುಮಾರ್‌ ದೊಡ್ಡಬಳ್ಳಾಪುರದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2024ರ ಜನವರಿಯಲ್ಲಿ ಹೊಸಕೋಟೆ ನಿವಾಸಿ ಉಮಾಶಂಕರ್‌ ಎಂಬ ರಿಯಲ್‌ ಎಸ್ಟೇಟ್‌ ಉದ್ಯಮಿ ಪರಿಚಯವಾಗಿದೆ. ಇವರ ಮುಖಾಂತರ ಪರಿಚಯವಾಗಿದ್ದ ವೈ.ಮೂರ್ತಿ ತಾನು ಅಮೇರಿಕನ್‌ ಏರೋಸ್ಪೇಸ್‌ ಕಂಪನಿಯಲ್ಲಿ ಮೆಂಬರ್‌ಶೀಪ್‌ ತೆಗೆದುಕೊಂಡಿದ್ದು, ಈ ಕಂಪನಿಗೆ ಐಟಂಗಳನ್ನು ಸಬರಾಜು ಮಾಡುತ್ತಿರುವುದಾಗಿ ಹೇಳಿದ್ದಾರೆ. ನೀವು ಸಹ ಈ ಕಂಪನಿ ಮೆಂಬರ್‌ಶಿಪ್‌ ತೆಗೆದುಕೊಂಡಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದ್ದಾರೆ.

ಹವಾಲ ಹಣದ ನೆಪದಲ್ಲಿ ಹಣ ವರ್ಗಾವಣೆ:

ವೈ.ಮೂರ್ತಿಯ ಮಾತು ನಂಬಿದ ಶಿವಕುಮಾರ್‌, ಮೊದಲಿಗೆ ₹5.50 ಲಕ್ಷ ನೀಡಿದ್ದಾರೆ. ಇದಾದ ಒಂದು ತಿಂಗಳ ಬಳಿಕ ವೈ.ಮೂರ್ತಿ, ನಮಗೆ ಹವಾಲ ಹಣ ಬಂದಿದ್ದು, ಆ ಹಣವನ್ನು ಬಿಡಿಸಿಕೊಳ್ಳಲು ₹10 ಲಕ್ಷ ಹಣದ ಅಗತ್ಯವಿದ್ದು, ಈ ಹಣವನ್ನು ಲೀಗಲ್‌ ಅಡ್ವೈಸರ್‌ ಅಭಿನಯ ರೆಡ್ಡಿಗೆ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಶಿವಕುಮಾರ್‌ ಏಪ್ರಿಲ್‌ನಲ್ಲಿ ಅಭಿನಯ ರೆಡ್ಡಿ ಬ್ಯಾಂಕ್‌ ಖಾತೆಗೆ ₹10 ಲಕ್ಷ ವರ್ಗಾಯಿಸಿದ್ದಾರೆ. ಇದಾದ ಬಳಿಕ ಮೂರ್ತಿ ಒಂದೊಂದು ಕಾರಣ ನೀಡಿ ಶಿವಕುಮಾರ್‌ ಅವರಿಂದ ವಿವಿಧ ಹಂತಗಳಲ್ಲಿ ಒಟ್ಟು ₹77.24 ಲಕ್ಷ ಹಣ ಪಡೆದಿದ್ದು, ಈವರೆಗೂ ಹಣ ವಾಪಾಸ್‌ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಮಿಷವೊಡ್ಡಿ ಹಲವರಿಂದ ಹಣ ಸಂಗ್ರಹ:

ವೈ.ಮೂರ್ತಿ ಇದೇ ರೀತಿ ಹವಾಲ ಹಣದಲ್ಲಿ ಹೆಚ್ಚಿನ ಲಾಭ ಕೊಡುವುದಾಗಿ ಹಲವರನ್ನು ನಂಬಿಸಿ ಲಕ್ಷಾಂತರ ರು. ಪಡೆದಿರುವುದು ಶಿವಕುಮಾರ್‌ಗೆ ತಿಳಿದು ಬಂದಿದೆ. ಅಧಿಕ ಲಾಭದ ಆಸೆ ತೋರಿಸಿ ಹಣ ಪಡೆದು ವಂಚಿಸಿದ ವೈ.ಮೂರ್ತಿ ಹಾಗೂ ಸಚಹರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಕುಮಾರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.