ಅರ್ಧ ಬೆಲೆಗೆ ಚಿನ್ನ ಕೊಡುವುದಾಗಿ ಎರಡೂವರೆ ಕೋಟಿ ರು. ಟೋಪಿ : ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

| N/A | Published : Mar 03 2025, 01:48 AM IST / Updated: Mar 03 2025, 04:30 AM IST

gold biscuit
ಅರ್ಧ ಬೆಲೆಗೆ ಚಿನ್ನ ಕೊಡುವುದಾಗಿ ಎರಡೂವರೆ ಕೋಟಿ ರು. ಟೋಪಿ : ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ₹4 ಸಾವಿರಕ್ಕೆ 1 ಗ್ರಾಂನಂತೆ ಕೆ.ಜಿ.ಗಟ್ಟಲೇ ಚಿನ್ನ ನೀಡುವುದಾಗಿ ನಂಬಿಸಿ ಮಹಿಳೆ ಹಾಗೂ ಅವರ ಸಂಬಂಧಿಕರಿಂದ ಸುಮಾರು ₹2.48 ಕೋಟಿ ಹಣ ಪಡೆದು ವಂಚಿಸಿದ ಆರೋಪದಡಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಚಿನ್ನದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ₹4 ಸಾವಿರಕ್ಕೆ 1 ಗ್ರಾಂನಂತೆ ಕೆ.ಜಿ.ಗಟ್ಟಲೇ ಚಿನ್ನ ನೀಡುವುದಾಗಿ ನಂಬಿಸಿ ಮಹಿಳೆ ಹಾಗೂ ಅವರ ಸಂಬಂಧಿಕರಿಂದ ಸುಮಾರು ₹2.48 ಕೋಟಿ ಹಣ ಪಡೆದು ವಂಚಿಸಿದ ಆರೋಪದಡಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಕೆ.ಆರ್‌.ಪುರದ ಸಾಯಿ ಲೇಔಟ್‌ ನಿವಾಸಿ ಅಮರಾವತಿ ಅವರು ನೀಡಿದ ದೂರಿನ ಮೇರೆಗೆ ಕೋಲಾರ ಮೂಲದ ಗೋಪಾಲಕೃಷ್ಣ, ಆತನ ಪತ್ನಿ ರೂಪಾ, ಪುತ್ರ ಯಶವಂತ್‌ ಕುಮಾರ್‌ ಹಾಗೂ ಆಂಧ್ರಪ್ರದೇಶ ಮೂಲದ ರಾಕೇಶ್‌ ರೆಡ್ಡಿ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೆ.ಆರ್‌.ಪುರದ ಸಾಯಿ ಲೇಔಟ್‌ ನಿವಾಸಿಯಾಗಿರುವ ಅಮರಾವತಿ ಅವರು, 2024ರ ಮಾರ್ಚ್‌ನಲ್ಲಿ ಮನೆಯಲ್ಲಿ ಶಾಂತಿ ಪೂಜೆಗಾಗಿ ಆರೋಪಿ ಗೋಪಾಲಕೃಷ್ಣ ಅವರನ್ನು ಕರೆಸಿದ್ದಾರೆ. ಪೂಜೆಯ ಸಮಯದಲ್ಲಿ ಆರೋಪಿ ರಾಕೇಶ್‌ ರೆಡ್ಡಿ, ಅಮರಾವತಿ ಅವರ ಮನೆಗೆ ಬಂದು ಗೋಪಾಲಕೃಷ್ಣಗೆ ನಮಸ್ಕರಿಸಿ, ನಿಮ್ಮ ಪೂಜೆಯ ಫಲವಾಗಿ ಐಶ್ವರ್ಯವಂತನಾಗಿದ್ದಾನೆ ಎಂದು ಹೇಳಿದ್ದಾನೆ. ಗುರುಕಾಣಿಕೆಯಾಗಿ 10-15 ಚಿನ್ನದ ಬಿಸ್ಕತ್‌ಗಳನ್ನು ಗೋಪಾಲಕೃಷ್ಣನಿಗೆ ನೀಡಿದ್ದಾನೆ. ಈ ವೇಳೆ ಗೋಪಾಲಕೃಷ್ಣ, ಅಮರಾವತಿ ಅವರನ್ನು ರಾಕೇಶ್‌ ರೆಡ್ಡಿಗೆ ಪರಿಚಯಿಸಿ, ಕಷ್ಟದಲ್ಲಿರುವ ಇವರಿಗೂ ಸಹಾಯ ಮಾಡುವಂತೆ ಸೂಚಿಸಿದ್ದಾನೆ. ಇದಕ್ಕೆ ರಾಕೇಶ್‌ ರೆಡ್ಡಿ ಒಪ್ಪಿಕೊಂಡಿದ್ದಾನೆ.

300 ಕೋಟಿ ಅಮೇರಿಕನ್‌ ಡಾಲರ್‌ ಕಟ್ಟುಕಥೆ:

ಎರಡು ದಿನಗಳ ಬಳಿಕ ಗೋಪಾಲಕೃಷ್ಣ ಮತ್ತು ರಾಕೇಶ್‌ ರೆಡ್ಡಿ, ಅಮರಾವತಿ ಅವರ ಮನೆಗೆ ಬಂದಿದ್ದಾರೆ. ನಾವಿಬ್ಬರೂ ಪಾಲುದಾರಿಕೆಯಲ್ಲಿ ಚಿನ್ನದ ವ್ಯವಹಾರ ಮಾಡುತ್ತಿದ್ದೇವೆ. ನಮ್ಮ ಬಳಿ 300 ಕೋಟಿ ಅಮೇರಿಕನ್‌ ಡಾಲರ್‌ ಇದ್ದು, ಕೆ.ಜಿ.ಲೆಕ್ಕದಲ್ಲಿ ನಮಗೆ ಚಿನ್ನ ಸಿಗುತ್ತದೆ. ನಾವು ಕೇವಲ ₹4000ಕ್ಕೆ 1ಗ್ರಾಂ ಚಿನ್ನ ನೀಡುತ್ತೇವೆ. ನಮ್ಮ ಚಿನ್ನದ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ, ಕಡಿಮೆ ಬಲೆಗೆ ಚಿನ್ನ ಕೊಡುವುದಾಗಿ ಹೇಳಿದ್ದಾರೆ. ಬಳಿಕ ಇಬ್ಬರು ಆರೋಪಿಗಳು ಅಮರಾವತಿ ಅವರ ಪುತ್ರನ ಸಮ್ಮುಖದಲ್ಲಿ ಮಲ್ಲೇಶ್ವರದ ಜುವೆಲರಿ ಅಂಗಡಿಯಲ್ಲಿ ಒಂದು ಚಿನ್ನದ ಬಿಸ್ಕತ್‌ ಮಾರಾಟ ಮಾಡಿ ಹಣ ಪಡೆದು ಅಮರಾವತಿ ಅವರ ನಂಬಿಕೆ ಗಿಟ್ಟಿಸಿದ್ದಾರೆ.

ಸಂಬಂಧಿಕರಿಂದಲೂ ಹಣ ಹೂಡಿಕೆ:

ಬಳಿಕ ಇಬ್ಬರು ಆರೋಪಿಗಳ ಮಾತು ನಂಬಿದ ಅಮರಾವತಿ ಅವರು, ಚಿನ್ನದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಲು ಒಪ್ಪಿದ್ದಾರೆ. ಅದರಂತೆ 2024ರ ಏ.20ರಿಂದ ಅ.30ರ ನಡುವೆ ಆರೋಪಿಗಳಿಗೆ ಒಟ್ಟು ₹1.39 ಲಕ್ಷ ಹಣ ನೀಡಿದ್ದಾರೆ. ಬಳಿಕ ಅಮರಾವತಿ ಅವರು ತಮ್ಮ ಸಂಬಂಧಿಕ ಗಣೇಶ್‌ಗೂ ಈ ವ್ಯವಹಾರದ ಬಗ್ಗೆ ತಿಳಿಸಿದ್ದಾರೆ. ನಂತರ ಗಣೇಶ್‌ ಹಾಗೂ ಅವರ ಕುಟುಂಬದವರು ಹೂಡಿಕೆ ನೆಪದಲ್ಲಿ ಆರೋಪಿಗಳಿಗೆ ಒಟ್ಟು ₹1.9 ಕೋಟಿ ನೀಡಿದ್ದಾರೆ. ಕೆಲ ದಿನಗಳ ಬಳಿಕ ಈ ಇಬ್ಬರು ಆರೋಪಿಗಳು ಅಮರಾವತಿ ಮತ್ತು ಅವರ ಸಂಬಂಧಿಕರಿಗೆ ಯಾವುದೇ ಚಿನ್ನ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಚಿನ್ನ ಕಸ್ಟಮ್ಸ್‌ನಲ್ಲಿ ಸಿಲುಕಿದೆ ಎಂದು ಸಬೂಬು ಹೇಳಿ ಮೋಸ ಮಾಡಿದ್ದಾರೆ.

ಹಣ ವಾಪಾಸ್‌ ಕೇಳಿದ್ದಕ್ಕೆ ಜೀವ ಬೆದರಿಕೆ

ಗೋಪಾಲಕೃಷ್ಣ ಅವರ ಮನೆಗೆ ತೆರಳಿ ಚಿನ್ನದ ಬಗ್ಗೆ ವಿಚಾರಿಸಿದಾಗ ಆತನ ಪತ್ನಿ ರೂಪಾ ಮತ್ತು ಪುತ್ರ ಯಶವಂತ ಕುಮಾರ್‌ ಹಣ ಕೇಳಲು ಮನೆ ಬಳಿ ಬಂದರೆ ಅಥವಾ ದೂರು ನೀಡಿದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಮರಾವತಿ ದೂರಿನಲ್ಲಿ ಆರೋಪಿಸಿದ್ದಾರೆ. ತಮಗೆ ಕಡಿಮೆ ದರಲ್ಲಿ ಚಿನ್ನ ಕೊಡುವುದಾಗಿ ನಂಬಿಸಿ ಹಣ ಪಡೆದು ನಂಬಿಕೆ ದ್ರೋಹ ಮಾಡಿರುವ ಈ ನಾಲ್ವರು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಮರಾವತಿ ದೂರು ಮನವಿ ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.