ಗೆಳೆಯನ 3 ತುಂಡು ಮಾಡಿ ಚರಂಡಿಗೆ ಎಸೆದ!

| Published : Jun 09 2024, 01:30 AM IST / Updated: Jun 09 2024, 04:04 AM IST

ಗೆಳೆಯನ 3 ತುಂಡು ಮಾಡಿ ಚರಂಡಿಗೆ ಎಸೆದ!
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸು ವಿಚಾರಚಾಗಿ ವ್ಯಕ್ತಿಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿ ವ್ಯಕ್ತಿಯ ದೇಹವನ್ನು ಮೂರು ತುಂಡಾಗಿ ಕತ್ತರಿಸಿ ಎಸೆದಿರುವುದು.

 ಬೆಂಗಳೂರು : ಹಣಕಾಸು ವಿವಾದದ ಹಿನ್ನೆಲೆಯಲ್ಲಿ ಪರಿಚಿತ ಚಿಟ್‌ ಫಂಡ್ ಸಂಸ್ಥೆಯ ಉದ್ಯೋಗಿಯನ್ನು ತಮ್ಮ ಮನೆಗೆ ಕರೆಸಿಕೊಂಡು ರಾಡ್‌ನಿಂದ ಹೊಡೆದು ಕೊಂದ ಬಳಿಕ ರುಂಡ-ಮುಂಡ ಕತ್ತರಿಸಿ ರಾಜಕಾಲುವೆಗೆ ಎಸೆದಿದ್ದ ಟ್ರಾವೆಲ್ಸ್‌ ಏಜೆನ್ಸಿ ಮಾಲೀಕನನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲ್ಯಾಣನಗರದ ನಿವಾಸಿ ಶ್ರೀನಾಥ್ (34) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ವಿಜಿನಾಪುರದ ನಿವಾಸಿ ಮಾಧವರಾವ್‌ ಎಂಬಾತನನ್ನು ಬಂಧಿಸಲಾಗಿದೆ. ಕಳೆದ ಮೇ 28ರಂದು ಚೀಟಿ ವ್ಯವಹಾರ ಸಂಬಂಧ ಮಾತನಾಡುವ ಸಲುವಾಗಿ ಶ್ರೀನಾಥ್‌ನನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದು ಬಳಿಕ ಬೆಳತ್ತೂರು ಸಮೀಪದ ರಾಜಕಾಲುವೆಗೆ ಮೃತದೇಹದ ತುಂಡುಗಳನ್ನು ಬಿಸಾಡಿ ಆತ ಪರಾರಿಯಾಗಿದ್ದ. ಪತಿ ನಾಪತ್ತೆ ಬಗ್ಗೆ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ ಭೀಕರ ಕೊಲೆ ಬಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚೀಟಿ ವ್ಯವಹಾರ ಕುದುರಿದ ಸ್ನೇಹ:

ಆಂಧ್ರಪ್ರದೇಶದ ಸಚಿತ್ತೂರು ಜಿಲ್ಲೆ ಮೂಲದವರಾದ ಮೃತ ಶ್ರೀನಾಥ್ ಹಾಗೂ ಮಾಧವರಾವ್ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ಪರಸ್ಪರ ಹಣಕಾಸು ವ್ಯವಹಾರ ಸಹ ಇತ್ತು. ಮಾರ್ಗದರ್ಶಿ ಚೀಟ್ ಫಂಡ್‌ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀನಾಥ್, ಕುಟುಂಬದೊಂದಿಗೆ ಕಲ್ಯಾಣನಗರದಲ್ಲಿ ವಾಸವಾಗಿದ್ದ. ಮೊದಲು ಗಾರೆ ಕೆಲಸಗಾರನಾಗಿದ್ದ ಮಾಧವರಾವ್‌, ನಂತರ ಎರಡು ಬಸ್‌ಗಳನ್ನು ಖರೀದಿಸಿ ತನ್ನೂರಿನಲ್ಲಿ ನಾಗವೇಣಿ ಹೆಸರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ. ಕುಟುಂಬದೊಂದಿಗೆ ವಿಜಿನಾಪುರದಲ್ಲಿ ವಾಸವಾಗಿದ್ದ.

ಶ್ರೀನಾಥ್ ಮೂಲಕ ಮಾರ್ಗದರ್ಶಿ ಚೀಟ್ ಫಂಡ್‌ನಲ್ಲಿ ತಲಾ ₹5 ಲಕ್ಷ ಮೌಲ್ಯದ ಎರಡು ಚೀಟಿಗಳನ್ನು ಮಾಧವರಾವ್ ಹಾಕಿದ್ದ. ಆದರೆ ಚೀಟಿ ಹಣ ಪಡೆದ ಬಳಿಕ ಸರಿಯಾಗಿ ಕಂತು ಕಟ್ಟದೆ ರಾವ್ ಸಬೂಬು ಹೇಳುತ್ತಿದ್ದ. ಇದೇ ಹಣಕಾಸು ವಿಚಾರವಾಗಿ ಇಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಪದೇ ಪದೇ ಕಂತು ಪಾವತಿಸುವಂತೆ ಶ್ರೀನಾಥ್ ಹೇಳುತ್ತಿದ್ದರಿಂದ ಕೆರಳಿದ ರಾವ್‌, ತನ್ನ ಗೆಳೆಯನ ಹತ್ಯೆಗೆ ನಿರ್ಧರಿಸಿದ್ದ. ಅಂತೆಯೇ ಮೇ 28ರಂದು ಕಾರ್ಯಕ್ರಮದ ನಿಮಿತ್ತ ಆಂಧ್ರಪ್ರದೇಶಕ್ಕೆ ರಾವ್ ಪತ್ನಿ ಹಾಗೂ ಮಕ್ಕಳು ತೆರಳಿದ್ದರು.

ಅದೇ ದಿನ ಮಧ್ಯಾಹ್ನ ಗೆಳೆಯನನ್ನು ಮಾತುಕತೆ ನೆಪದಲ್ಲಿ ತನ್ನ ಮನೆಗೆ ರಾವ್ ಆಹ್ವಾನಿಸಿದ್ದ. ಮನೆಯಲ್ಲಿ ಹಣಕಾಸು ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ರಾವ್‌, ಶ್ರೀನಾಥ್‌ನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡು ಆತ ಮೃತಪಟ್ಟ ಬಳಿಕ ಮನೆಯಿಂದ ಹೊರ ಹೋಗಿ ಬ್ಯಾಗ್ ಹಾಗೂ ಮಚ್ಚು ತಂದಿದ್ದಾನೆ. ಬಳಿಕ ಮೃತನ ದೇಹದ ರುಂಡು ಹಾಗೂ ಮುಂಡಗಳನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಬ್ಯಾಗ್‌ಗಳಿಗೆ ತುಂಬಿಕೊಂಡು ಬೆಳತ್ತೂರು ಸಮೀಪದ ರಾಜಕಾಲುವೆಗೆ ಬಿಸಾಡಿ ಆಂಧ್ರಕ್ಕೆ ಪರಾರಿಯಾಗಿದ್ದ.

ಸಿಸಿಟಿವಿಯಲ್ಲಿ ಬಯಲಾದ ಸತ್ಯ

ಮೇ 28ರಂದು ತಮ್ಮ ಪತಿ ಮನೆಗೆ ಬಾರದೆ ಹೋದಾಗ ಆತಂಕಗೊಂಡ ಶ್ರೀನಾಥ್‌ ಪತ್ನಿ ಸಂಪಿಗೆಹಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಆದರೆ ತನ್ನ ಪತಿ ಕಣ್ಮರೆ ಹಿಂದೆ ಮಾಧವರಾವ್‌ ಪಾತ್ರವಿರಬಹುದು ಎಂದು ಪತ್ನಿ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ರಾವ್‌ ಮನೆಗೆ ಮೇ 28ರಂದು ಶ್ರೀನಾಥ್ ಬಂದಿರುವ ಸಿಸಿಟಿವಿ ದೃಶ್ಯಾವಳಿಗಳು ಪತ್ತೆಯಾದ್ದವು. ಅಲ್ಲದೆ ಆ ದಿನ ಶ್ರೀನಾಥ್ ಮೊಬೈಲ್‌ಗೆ ರಾವ್‌ನದ್ದೇ ಕೊನೆಯ ಕರೆ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದಿನ ತನಿಖೆಗೆ ರಾಮಮೂರ್ತಿನಗರ ಠಾಣೆಗೆ ವರ್ಗವಾಯಿತು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ರಾವ್‌ನನ್ನು ಬಂಧಿಸಿ ರಾಮಮೂರ್ತಿನಗರ ಠಾಣೆ ಪೊಲೀಸರು ಕರೆತಂದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಪತ್ನಿಯ ಜತೆ ಮೃತನ ಸ್ನೇಹ ಸಲುಗೆ

ಆರೋಪಿ ಮಾಧವರಾವ್ ಹಾಗೂ ಮೃತ ಶ್ರೀನಾಥ್ ನಡುವೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲಿ ರಾವ್ ಮನೆಗೆ ಆಗಾಗ್ಗೆ ಶ್ರೀನಾಥ್ ಬಂದು ಹೋಗುವುದು ಮಾಡುತ್ತಿದ್ದ. ಆಗ ರಾವ್‌ನ ಪತ್ನಿ ಜತೆ ಮೃತ ಶ್ರೀನಾಥ್‌ಗೆ ಸಲುಗೆ ಬೆಳೆದಿತ್ತು. ಈ ಸಂಗತಿ ತಿಳಿದು ಕೆರಳಿ ರಾವ್‌, ಗೆಳೆಯನ ಹತ್ಯೆಗೆ ನಿರ್ಧರಿಸಿದ್ದ ಎಂದು ಮೂಲಗಳು ಹೇಳಿವೆ.

ಮೃತನ ರುಂಡ-ಮುಂಡಕ್ಕೆ ತಲಾಶ್

ಬೆಳತ್ತೂರು ಸಮೀಪದ ರಾಜಕಾಲುವೆಗೆ ಮೃತನ ರುಂಡ-ಮುಂಡ ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ ಇದುವರೆಗೆ ಮೃತನ ಪತ್ತೆಯಾಗಿಲ್ಲ. ರಾಜಕಾಲುವೆಯಲ್ಲಿ ಮೃತದೇಹದ ತುಂಡುಗಳಿಗೆ ಹುಡುಕಾಟ ನಡೆಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.