ಬೆಂಗಳೂರು : ಸೈಟ್‌ ಮಾರಿದ್ದ ₹2 ಕೋಟಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸ್ನೇಹಿತರ ಬಂಧನ

| N/A | Published : Apr 09 2025, 02:00 AM IST / Updated: Apr 09 2025, 04:41 AM IST

Money

ಸಾರಾಂಶ

ತಮ್ಮ ಭೂಮಿ ಮಾರಾಟ ಮಾಡಿ ಮನೆಗೆ ಮರಳುವಾಗ ಉದ್ಯಮಿಯೊಬ್ಬರ ₹2.2 ಕೋಟಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸ್ನೇಹಿತರನ್ನು ಸುಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹2.20 ಕೋಟಿ ನಗದು ಹಾಗೂ ₹15 ಲಕ್ಷ ಮೌಲ್ಯದ ಇನ್ನೋವಾ ಕಾರು ಜಪ್ತಿ ಮಾಡಿದ್ದಾರೆ.

  ಬೆಂಗಳೂರು : ತಮ್ಮ ಭೂಮಿ ಮಾರಾಟ ಮಾಡಿ ಮನೆಗೆ ಮರಳುವಾಗ ಉದ್ಯಮಿಯೊಬ್ಬರ ₹2.2 ಕೋಟಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಸ್ನೇಹಿತರನ್ನು ಸುಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹2.20 ಕೋಟಿ ನಗದು ಹಾಗೂ ₹15 ಲಕ್ಷ ಮೌಲ್ಯದ ಇನ್ನೋವಾ ಕಾರು ಜಪ್ತಿ ಮಾಡಿದ್ದಾರೆ.

ಚಿಕ್ಕಕಲ್ಲಸಂದ್ರದ ಮಂಜುನಾಥ್‌ ಹಾಗೂ ನಾಗನಾಯಕನಹಳ್ಳಿಯ ಕೃಷ್ಣಕುಮಾರ್ ಬಂಧಿತರು. ಕೆಲ ದಿನಗಳ ಹಿಂದೆ ಬನಶಂಕರಿ 2ನೇ ಹಂತದ ಸುಕುಮಾರ್ ಅವರು ಕನಕಪುರದಿಂದ ತಮ್ಮ ಸ್ನೇಹಿತರಾದ ಮಂಜುನಾಥ್ ಹಾಗೂ ಕೃಷ್ಣ ಕುಮಾರ್ ಜತೆ ಜಮೀನು ಮಾರಾಟ ಮಾಡಿ ಮರಳುವಾಗ ಈ ಕೃತ್ಯ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬನಶಂಕರಿಯಲ್ಲಿ ಸುಕುಮಾರ್ ನೆಲೆಸಿದ್ದು, ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದಾರೆ. 3 ವರ್ಷಗಳ ಹಿಂದೆ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನಲ್ಲಿ ಖರೀದಿಸಿದ್ದ 4.18 ಎಕರೆ ಜಮೀನನ್ನು ಅವರು ಮಾರಾಟ ಮಾಡಿದ್ದರು. ಮಾ.28ರಂದು ಹಾರೋಹಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಆ ಜಮೀನು ಪರಭಾರೆ ಮುಗಿಸಿ ಅವರು ಮರಳುವಾಗ ಈ ಕಳ್ಳತನ ನಡೆದಿತ್ತು.

ಇನ್ನು 10 ವರ್ಷಗಳಿಂದ ಸುಕುಮಾರ್‌ಗೆ ಮಂಜುನಾಥ್ ಪರಿಚಯವಿದ್ದು, ಕೆಲ ವರ್ಷಗಳ ಹಿಂದೆ ಸುಕುಮಾರ್ ಮನೆಯಲ್ಲೇ ಆತ ಬಾಡಿಗೆದಾರನಾಗಿದ್ದ. ಇದೇ ಗೆಳೆತನದಲ್ಲಿ ಜಮೀನು ನೋಂದಣಿ ತೆರಳುವಾಗ ಆತನ ಕಾರಿನಲ್ಲೇ ಸುಕುಮಾರ್ ಹೋಗಿದ್ದರು. ಆ ವೇಳೆ ಹಣದ ಮೇಲೆ ದುರಾಸೆ ಪಟ್ಟ ಮಂಜುನಾಥ್‌, ತನ್ನ ಮತ್ತೊಬ್ಬ ಸ್ನೇಹಿತ ಕೃಷ್ಣ ಜತೆಗೂಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಅಂತೆಯೇ ಜಮೀನು ಮಾರಾಟ ಮುಗಿಸಿ ₹2.2 ಕೋಟಿ ಹಣ ತೆಗೆದುಕೊಂಡು ಮನೆಗೆ ಸುಕುಮಾರ್ ಮರಳುತ್ತಿದ್ದರು. ಆಗ ದಾರಿ ಮಧ್ಯೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ತಮ್ಮ ಖಾತೆಗೆ ಜಮೆಯಾಗಿದ್ದ ₹1 ಲಕ್ಷ ಹಣವನ್ನು ಪಡೆಯಲು ಎಟಿಎಂಗೆ ಸುಕುಮಾರ್ ತೆರಳಿದ್ದರು. ಇತ್ತ ಕಾರಿನಲ್ಲಿದ್ದ ಅವರ ಸ್ನೇಹಿತರು ಹಣದ ಸಮೇತ ಪರಾರಿಯಾಗಿದ್ದರು. ಕೂಡಲೇ ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆಗೆ ಸುಕುಮಾರು ದೂರು ನೀಡಿದರು.

ಆ ವೇಳೆ ಪೊಲೀಸರು, ಕಾರು ಬೆನ್ನಹತ್ತಿದ್ದಾಗ ಚಾಮರಾಜಪೇಟೆಯ ಕಿಮ್ಸ್ ಆಸ್ಪತ್ರೆ ಬಳಿ ಕಾರು ಪತ್ತೆಯಾಗಿತ್ತು. ಆದರೆ, ಆರೋಪಿಗಳು, ಕಿಮ್ಸ್ ಬಳಿ ಬೇರೊಂದು ಕಾರನ್ನು ತರಿಸಿಕೊಂಡು ಹಣದ ಬ್ಯಾಗ್‌ ಸಮೇತ ಮಂಡ್ಯಕ್ಕೆ ಪರಾರಿಯಾಗಿದ್ದರು. ಕೊನೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕಾರು ಚಾಲಕ ಕಮ್ ಕ್ರಿಮಿನಲ್‌:ಈ ಆರೋಪಿಗಳ ಪೈಕಿ ಮಂಜುನಾಥ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಆತನ ಮೇಲೆ ಬಸನವಗುಡಿ, ಹನುಮಂತನಗರ ಹಾಗೂ ಶ್ರೀರಂಗಪಟ್ಟಣ ಠಾಣೆಗಳಲ್ಲಿ ದರೋಡೆ, ಅಪಹರಣ ಹಾಗೂ ದೌರ್ಜನ್ಯ ಪ್ರಕರಣಗಳಿವೆ. ಕಾರು ಚಾಲಕನಾಗಿದ್ದ ಆತ, ಸಣ್ಣಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಹ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.