ಗುಂಪು ಜಗಳ ಕೊಲೆಯಲ್ಲಿ ಅಂತ್ಯ

| Published : Feb 02 2024, 01:02 AM IST / Updated: Feb 02 2024, 05:43 PM IST

Crime

ಸಾರಾಂಶ

ಬೆಂಗಳೂರಿನ ಕೆ.ಆರ್‌.ಪುರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಒಬ್ಬನನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಯ್ಯಪ್ಪ ನಗರದ ನಿವಾಸಿ ದರ್ಶನ್ (41) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಪರಿಚಿತರಾದ ಮಧುಸೂದನ್‌, ನರೇಶ್ ಹಾಗೂ ತ್ಯಾಗರಾಜ್‌ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಹಗಲು ಕನಸಿನ ಕೆರೆ ಸಮೀಪದ ದೀಪಾ ಆಸ್ಪತ್ರೆ ಮುಂಭಾಗ ದರ್ಶನ್ ಹಾಗೂ ಆರೋಪಿಗಳ ನಡುವೆ ಜಗಳವಾಗಿದೆ. ಆಗ ಮೃತನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸವಿಲ್ಲದೆ ಅಲೆಯುತ್ತಿದ್ದ ದರ್ಶನ್‌, ಬುಧವಾರ ರಾತ್ರಿ ಮದ್ಯ ಸೇವಿಸಿ ಗೆಳೆಯ ಅನಿಲ್ ಜತೆ ತೆರಳುತ್ತಿದ್ದ. ಆ ವೇಳೆ ದೀಪಾ ಆಸ್ಪತ್ರೆ ಸಮೀಪ ಅವರಿಗೆ ಮಧುಸೂದನ್ ಹಾಗೂ ಆತನ ಸ್ನೇಹಿತರು ಎದುರಾಗಿದ್ದಾರೆ. ಆಗ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ಶುರುವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದೆ. ಈ ಹಂತದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆಗ ಕೆರಳಿದ ಆರೋಪಿಗಳು, ದರ್ಶನ್‌ಗೆ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ರೈಲಿನಲ್ಲಿ ಸಂಬಂಧಿಯ ಚಿನ್ನ ಕದ್ದ ಮಹಿಳೆ ಜೈಲು ಪಾಲು

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಸೋದರ ಸಂಬಂಧಿ ಮಹಿಳೆಯ ಚಿನ್ನದ ಸರ ಕಳ‍ವು ಮಾಡಿದ್ದ ಮಹಿಳೆಯೊಬ್ಬಳನ್ನು ದಂಡು ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಠದಹಳ್ಳಿ ನಿವಾಸಿ ಚಂದ್ರಶರ್ಮಾ ಬಂಧಿತಳಾಗಿದ್ದು, ಆರೋಪಿಯಿಂದ ₹8.51 ಲಕ್ಷ ಮೌಲ್ಯದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಕೇರಳದಿಂದ ನಗರಕ್ಕೆ ಬರುವಾಗ ರೈಲಿನಲ್ಲಿ ತಮ್ಮ ಸಂಬಂಧಿ ನಾಗವಾರಪಾಳ್ಯದ ಲಲಿತಾ ಅವರ ಚಿನ್ನಾಭರಣವನ್ನು ಆರೋಪಿ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಜ.25 ಕೇರಳ ರಾಜ್ಯದ ಪಾಲ್ಕಾಡ್‌ನಲ್ಲಿ ನಡೆದ ತಮ್ಮ ಸಂಬಂಧಿ ಮನೆಯ ಗೃಹ ಪ್ರವೇಶಕ್ಕೆ ನಾಗವಾರಪಾಳ್ಯದ ಲಲಿತಾ ಹೋಗಿದ್ದರು. ಎರಡು ದಿನಗಳ ಬಳಿಕ ಬಂಧುಗಳ ಜತೆ ಕೊಚ್ಚುವೇಲಿ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ ಲಲಿತಾ ನಗರಕ್ಕೆ ಮರಳಿದ್ದರು. ಕೆ.ಆರ್‌.ಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ಮರಳಿದ ಬಳಿಕ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಅವರಿಗೆ ಗೊತ್ತಾಗಿದೆ. ಆದರೆ ಲಲಿತಾ ಅವರ ಜತೆ ಕೇರಳದಿಂದ ಪ್ರಯಾಣಿಸಿದ್ದ ಸಂಬಂಧಿ ಚಂದ್ರಶರ್ಮಾ ದಂಡು ರೈಲು ನಿಲ್ದಾಣದಲ್ಲೇ ಇಳಿದು ಹೋಗಿದ್ದಳು. ಈ ಕಳ್ಳತನ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಶಂಕೆ ಮೇರೆಗೆ ಚಂದ್ರಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.