ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಟೌವ್ ಹಚ್ಚಿದಾಗ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡು ಸುಮಾರು 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ಘಟನೆ ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಟೌವ್ ಹಚ್ಚಿದಾಗ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡು ಸುಮಾರು 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ಘಟನೆ ತಾಲೂಕಿನ ಶ್ಯಾದನಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಗ್ರಾಮದ ನಿವಾಸಿ ಲೇಟ್ ಸ್ವಾಮಿಗೌಡರ ಪತ್ನಿ ಭಾಗ್ಯಮ್ಮ ಹಾಗೂ ಪುತ್ರ ಪುನೀತ್ ಮತ್ತು ಸ್ವಾಮಿಗೌಡರ ಸಹೋದರ ನಾಗೇಗೌಡರ ಮನೆಗಳಿಗೆ ಹಾನಿಯಾಗಿದೆ.ಮನೆ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಗ್ಯಾಸ್ ಸಿಲಿಂಡರ್ ತಂದು ಪಿಟ್ ಮಾಡಿ ಅಡುಗೆ ಮಾಡಲು ಸ್ಟೌವ್ ಹಚ್ಚಲು ಹೋದಾಗ ಈ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿರುವುದು ಮನೆಯವರಿಗೆ ತಿಳಿದಿರಲಿಲ್ಲ.
ತಕ್ಷಣ ನೆರೆಹೊರೆಯವರು ಬೆಂಕಿ ಆರಿಸಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಎರಡು ಮನೆಗಳಲ್ಲಿಯೂ ಹೆಂಚುಗಳು ಹಾಗೂ ಜಂತಿಗಳು, ಬಾಗಿಲು, ತೆಂಗಿನ ಕಾಯಿಗಳು, ತೆಂಗಿನಮೊಟ್ಟೆಗಳು, ಎರಡು ಹಾಸಿಗೆ, ಬಟ್ಟೆ ಬರೆಗಳು ಸೇರಿದಂತೆ ಇತರೆ ದಿನನಿತ್ಯ ಬಳಸುವ ವಸ್ತುಗಳು ನಷ್ಟಕ್ಕೊಳಗಾಗಿವೆ.ಎರಡು ಮನೆಯವರು ಕಡು ಬಡವರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಿಕೊಡಬೇಕು ಎಂದು ರೈತಸಂಘದ ಮುಖಂಡ ಶ್ಯಾದನಹಳ್ಳಿ ಚಲುವರಾಜು ಒತ್ತಾಯಿಸಿದರು.
ನಮ್ಮ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿದಾಗ ಗ್ಯಾಸ್ ಸಿಲಿಂಡರ್ ಸೋರಿಕೆ ಅಥವಾ ಸಿಲಿಂಡರ್ ಸ್ಫೋಟದಿಂದ ಈ ಘಟನೆ ನಡೆದಿಲ್ಲ. ಮನೆಯವರು ಸೌದೆ ಒಲೆ ಹಚ್ಚಿರಬಹುದು. ಆ ವೇಳೆ ಕಾಯಿ ಮೊಟ್ಟೆಗೆ ಬೆಂಕಿ ತಗುಲಿ ಈ ರೀತಿಯಾಗಿದೆ. ಆ ವೇಳೆ ಸಿಲಿಂಡರ್‌ಗೂ ಸ್ವಲ್ಪ ಬೆಂಕಿ ತಗುಲಿದೆ ಅಷ್ಟ. ಈ ಕುರಿತು ಸೂಕ್ತ ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ ಎಂದು ಪ್ರಕಾಶ್ ಗ್ಯಾಸ್ ಏಜೆನ್ನಿಸ್ ಮಾಲೀಕ ಎಚ್.ತ್ಯಾಗರಾಜು ತಿಳಿಸಿದ್ದಾರೆ.ಪ್ರಜ್ಞೆ ತಪ್ಪಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು
ಮಳವಳ್ಳಿ:ಪಟ್ಟಣದ ಹೊರಭಾಗದ ಕನಕಪುರ ರಸ್ತೆ ಕ್ಯಾತೇಗೌಡನದೊಡ್ಡಿ ಗ್ರಾಮದ ಬಳಿ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಸಮೃದ್ದಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿರುವ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ವ್ಯಕ್ತಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಗ್ರಾಮಾಂತರ ಠಾಣೆ ಸಿಬ್ಬಂದಿ ನಾಗೇಂದ್ರ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮೃತ ಅಪರಿಚಿತ ವ್ಯಕ್ತಿಯೂ 35 ರಿಂದ 40 ವರ್ಷ, ಮುಂಭಾಗದ 2 ಹಲ್ಲುಗಳು ಇಲ್ಲ, ಎಣ್ಣೆಗೆಂಪು ಮೈಬಣ್ಣ, ಗುಂಡುಮುಖ, ಕುರುಚಲು ಗಡ್ಡ, ಆಕಾಶ್ ನೀಲಿ ಬಣ್ಣದ ಕಪ್ಪು ಗೆರೆಯುಳ್ಳ ಅರ್ಧ ತೋಲಿನ ಶರ್ಟ್ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ವಾರಸುದಾರರು ಇದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಸ್ತೆ ಅಪಘಾತ: ಬಾಲಕಿಗೆ ಗಾಯ
ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿಯಲ್ಲಿ ರಸ್ತೆ ದಾಟುತ್ತಿದ್ದಾಗ ಮೋಟಾರ್ ಬೈಕ್ ಡಿಕ್ಕಿಯಾಗಿ ಬಾಲಕಿ ತೀವ್ರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಶಾಲೆಗೆ ತೆರಳಿದ್ದ ಬಾಲಕಿ ದೀಕ್ಷಿತಾ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಹಲಗೂರು ಕಡೆಯಿಂದ ಕನಕಪುರ ಕಡೆಗೆ ತೆರಳುತ್ತಿದ್ದ ಮೋಟಾರ್ ಬೈಕ್ ಡಿಕ್ಕಿಯಾಗಿದೆ. ಗಾಯಗೊಂಡ ದಿಕ್ಷೀತಾರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.