ಸಾರಾಂಶ
ಬೆಂಗಳೂರು : ಮನೆಯಲ್ಲಿ ಅನಿಲ ಸೋರಿಕೆಯಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬಾಲಕಿ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಸಂಜಯ್ ಗಾಂಧಿ ನಗರದ 2ನೇ ಅಡ್ಡರಸ್ತೆಯ ಕೊಳಗೇರಿಯ ವಸತಿ ಸಮುಚ್ಚಯದ ನಿವಾಸಿಗಳಾದ ಶಿವಾಂಗಿ, ರೇಖಾ, ಚಂದ್ರೇಶ್ ಹಾಗೂ ಅಣ್ಣಾ ದೊರೈ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಆರು ಮನೆಗಳಿಗೆ ಸಹ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸರ್ಕಾರ ನಿರ್ಮಾಣ ವಸತಿ ಸಮುಚ್ಚಯದಲ್ಲಿ ಅಣ್ಣಾ ದೊರೈ ಸೇರಿದಂತೆ ಗಾಯಾಳುಗಳು ನೆರೆಹೊರೆಯಲ್ಲಿ ವಾಸವಾಗಿದ್ದಾರೆ. ತಮ್ಮ ಪತ್ನಿ ಅಕಾಲಿಕ ಮರಣದ ನಂತರ ಮಗಳ ಜತೆ ದೊರೈ ನೆಲೆಸಿದ್ದು, ಭಾನುವಾರ ಅಜ್ಜಿ ಮನೆಗೆ ಅವರ ಪುತ್ರಿ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಏಕಾಂಗಿಯಾಗಿದ್ದ ಅವರು, ರಾತ್ರಿ ಮಲಗುವಾಗ ಗ್ಯಾಸ್ ಸರಿಯಾಗಿ ಬಂದ್ ಮಾಡದೆ ನಿದ್ರೆಗೆ ಜಾರಿದ್ದಾರೆ. ಆಗ ಅನಿಲ ಸೋರಿಕೆಯಾಗಿ ಮನೆ ತುಂಬಾ ಆವರಿಸಿದೆ. ಎಂದಿನಂತೆ ಬೆಳಗ್ಗೆ 6 ಗಂಟೆಗೆ ನಿದ್ರೆಯಿಂದ ಎದ್ದ ದೊರೈ ಲೈಟ್ ಆನ್ ಮಾಡಿದಾಗ ಸಿಲಿಂಡರ್ ಸಿಡಿದಿದೆ. ಈ ಸ್ಫೋಟದ ತೀವ್ರತೆಗೆ ಅವರ ಮನೆ ಗೋಡೆ ಕುಸಿದು ಬಿದ್ದಿದೆ. ಆಗ ನೆರೆಹೊರೆಯ ಶಿವಾಂಗಿ, ರೇಖಾ ಹಾಗೂ ಚಂದ್ರೇಶ್ ಸಹ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಗಾಯಾಳುಗಳು ಸ್ಪಂದಿಸುತ್ತಿದ್ದು, ಅವರೆಲ್ಲ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಸಂತ್ರಸ್ತರಿಗೆ ಸಚಿವ ಜಮೀರ್ ನೆರವು:
ಸಿಲಿಂಡರ್ ಸ್ಫೋಟದ ಗಾಯಾಳುಗಳ ವೈದ್ಯಕೀಯ ಚಿಕಿತ್ಸೆಗೆ ರಾಜ್ಯ ವಸತಿ ಸಚಿವ ಜಮೀರ್ ಅಹಮದ್ ಖಾನ್ ನೆರವು ನೀಡಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ದುರಂತದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವರಿಗೆ ಪುನವರ್ಸತಿ ಕಲ್ಪಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಅಲ್ಲದೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವರು, ಗಾಯಾಳು ಅಣ್ಣಾ ದೊರೈ ಅವರಿಗೆ ₹50 ಸಾವಿರ ಹಾಗೂ ಘಟನೆಯಲ್ಲಿ ಹಾನಿಗೊಳಗಾದ ದ್ವಿಚಕ್ರ ವಾಹನಗಳ ವಾರಸುದಾರರಿಗೆ ವಾಹನಗಳ ದುರಸ್ತಿಗೆ ತಲಾ ₹25 ಸಾವಿರವನ್ನು ವೈಯಕ್ತಿಕವಾಗಿ ಸಹಾಯ ಧನವನ್ನು ಸಚಿವ ಜಮೀರ್ ನೀಡಿದರು.