ಸಾರಾಂಶ
ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ತುಂಬಿದ್ದ ಲಾರಿ ನೈಸ್ ರಸ್ತೆಯಲ್ಲಿ ಬುಧವಾರ ರಸ್ತೆಗುರುಳಿದ ಪರಿಣಾಮ ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿ ನಾಗರಿಕರು ಪರದಾಡಿದರು.
ಕೇರಳದ ಕೊಚ್ಚಿಯಿಂದ ತಮಿಳುನಾಡಿನ ಹೊಸೂರು ನಗರಕ್ಕೆ ನೈಸ್ ರಸ್ತೆ ಮೂಲಕ ನಸುಕಿನ 3.30ರ ಸುಮಾರಿಗೆ ಗ್ಯಾಸ್ ಲಾರಿ ತೆರಳುತ್ತಿತ್ತು. ಜಿಟಿ ಜಿಟಿ ಮಳೆಯಿಂದಾಗಿ ನೈಸ್ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಲಾರಿ ಉರುಳಿದೆ. ಆದರೆ ಯಾರೊಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿಲ್ಲ. ಅನಿಲ ಸೋರಿಕೆ ಸಹ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನಾ ಸ್ಥಳಕ್ಕೆ ಭಾರತೀಯ ಪೆಟ್ರೋಲಿಯಂ ಕಂಪನಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಕೊನೆಗೆ ಪೀಕ್ ಆವರ್ ಮುಗಿದ ನಂತರ ನೈಸ್ ರಸ್ತೆಯಲ್ಲಿ ಕೆಲ ಹೊತ್ತು ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಲಾರಿ ತೆರವುಗೊಳಿಸಲಾಯಿತು. ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ನೈಸ್ ರಸ್ತೆ ಟೋಲ್ ಸಹ ಮುಚ್ಚಲಾಗಿತ್ತು. ಇದರಿಂದ ಬನ್ನೇರುಘಟ್ಟ ರಸ್ತೆಯಿಂದ ನೈಸ್ ರಸ್ತೆ ಹಾದು ತುಮಕೂರು ರಸ್ತೆಗೆ ಸಾಗುವ ಮಾರ್ಗದಲ್ಲಿ ಎರಡ್ಮೂರು ಗಂಟೆ ವಾಹನ ಸಂಚಾರದಲ್ಲಿ ಆಡಚಣೆಯಾಗಿತ್ತು. ದೊಡ್ಡ ಮಟ್ಟದ ವಾಹನ ದಟ್ಟಣೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.