ಸಾರಾಂಶ
ಬೆಂಗಳೂರು : ನಗರದ ಮಾರತ್ತಹಳ್ಳಿಯ ಯಮಲೂರು ರಸ್ತೆಯಲ್ಲಿ ಬುಧವಾರ ಬೆಂಗಳೂರು ಜಲಮಂಡಳಿಯ ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಲೈನ್ ಒಡೆದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬನ್ನಪ್ಪ ಕಾಲೋನಿ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರಿನ ಸಮಸ್ಯೆ ಇರುವ ಕಾರಣಕ್ಕೆ ಯಮಲೂರು ರಸ್ತೆಯಲ್ಲಿ ಕಾವೇರಿ ನೀರಿನ ಕೊಳವೆ ಸಂಪರ್ಕಗೊಳಿಸುವ ಕಾಮಗಾರಿಯನ್ನು ಬೆಂಗಳೂರು ಜಲಮಂಡಳಿ ಕೈಗೊಂಡಿತ್ತು. ಜೆಸಿಬಿ ಯಂತ್ರ ಬಳಕೆ ಮಾಡಿ ಗುಂಡಿ ತೆಗೆಯುವಾಗ ಗ್ಯಾಸ್ ಪೈಪ್ ಒಡೆದಿದೆ. ಜಲಮಂಡಳಿ ಅಧಿಕಾರಿಗಳು ತಕ್ಷಣ ಗೇಲ್ ಗ್ಯಾಸ್ ಕಂಪನಿಯ ಅಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಗೇಲ್ ಕಂಪನಿಯ ತಂಡ ಆಗಮಿಸಿ ಗ್ಯಾಸ್ ಪೈಪ್ ಲೈನ್ ದುರಸ್ತಿ ಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು, ಕಾವೇರಿ ನೀರಿನ ಪೈಪ್‌ಲೈನ್ ಮೇಲ್ಭಾಗದಲ್ಲಿಯೇ ಗ್ಯಾಸ್ ಪೈಪ್ ಅಳವಡಿಕೆ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗೇಲ್ ಗ್ಯಾಸ್ ಕಂಪನಿಗೆ ಮಾಹಿತಿ ನೀಡಿ ಕಾಮಗಾರಿ ಆರಂಭಿಸಲಾಗಿತ್ತು.
ಬುಧವಾರ ಸುಮಾರು 11 ಗಂಟೆ ಸಂದರ್ಭದಲ್ಲಿ ಘಟನೆ ನಡೆದಿದೆ. ಇದರಿಂದ ರಸ್ತೆ ಬಂದ್ ಮಾಡಲಾಗಿತ್ತು. ಹಾಗಾಗಿ, ಸಂಚಾರ ದಟ್ಟಣೆ ಉಂಟಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆಅವಕಾಶ ಮಾಡಿಕೊಡಲಾಯಿತು. ಯಾವುದೇ ಅನಾಹುತ ಉಂಟಾಗಿಲ್ಲ. ಗ್ಯಾಸ್ ಸೋರಿಕೆಯಾಗಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಎಂದು ತಿಳಿಸಿದ್ದಾರೆ.