ಸಾರಾಂಶ
ಮಂಡ್ಯ : ಅಪ್ರಾಪ್ತರು ಚುಡಾಯಿಸಿದ್ದರಿಂದ ಮನನೊಂದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀನಿವಾಸ್-ಹೇಮಾವತಿ ದಂಪತಿ ಪುತ್ರಿ ಇಂಪನಾ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಗ್ರಾಮದ ವಿವೇಕ ವಿದ್ಯಾ ಸಂಸ್ಥೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಇಂಪನಾಳನ್ನು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ನಾಲ್ವರು ಚುಡಾಯಿಸಿದ್ದಾರೆ ಎನ್ನಲಾಗಿದೆ. ಆಕೆ ಮಾತನಾಡಿದ್ದಳೆನ್ನಲಾದ ಆಡಿಯೋವನ್ನು ಯುವಕರು ನಿಮ್ಮ ಮನೆಯವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ನಂತರ ಆಡಿಯೋ ತುಣುಕನ್ನು ಇಂಪನಾಳ ತಾಯಿಗೆ ಕಳುಹಿಸಿದ್ದರು. ಈ ವಿಚಾರ ಇಂಪನಾಳಿಗೆ ತಿಳಿದು ಮನೆಯವರು ಜಮೀನಿಗೆ ಹೋಗಿದ್ದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಗೆ ಬಂದು ನೋಡಲಾಗಿ ಇಂಪನಾ ಸಾವನ್ನಪ್ಪಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದು ಮಿಮ್ಸ್ ಶವಾಗಾರದಲ್ಲಿ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಇಂಪನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಯುವಕರ ತಮ್ಮ ಮನೆಯವರೊಂದಿಗೆ ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಇಂಪನಾ ಸಾವಿನಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ಸ್‌ಪೆಕ್ಟರ್ ಶಿವಪ್ರಸಾದ್ ಇತರೆ ಅಧಿಕಾರಿಗಳು ಗ್ರಾಮದಲ್ಲೇ ಬೀಡು ಬಿಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ.