ಸಾರಾಂಶ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಮನೆಯಿಂದ ಊಟ, ಬಟ್ಟೆ, ಹಾಸಿಗೆ ಮತ್ತು ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಮನೆಯಿಂದ ಊಟ, ಬಟ್ಟೆ, ಹಾಸಿಗೆ ಮತ್ತು ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಕುರಿತಂತೆ ಮಂಗಳವಾರ ದರ್ಶನ್ (47) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಂಧೀಖಾನೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಧೀಕ್ಷಕ, ನಗರ ಪೊಲೀಸ್ ಆಯುಕ್ತರು ಮತ್ತು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಮನೆಯಿಂದ ಆಹಾರ, ಹಾಸಿಗೆ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್, ಜೈಲು ಅಧೀಕ್ಷಕರಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಗೆ ಕಾರಣ ಏನು?:
ಜೈಲಿನಲ್ಲಿ ನೀಡುತ್ತಿರುವ ಆಹಾರ ಜೀರ್ಣವಾಗುತ್ತಿಲ್ಲ. ಹೀಗಾಗಿ ಅಜೀರ್ಣ ಸಮಸ್ಯೆ ಕಾಣಿಸಿಕೊಂಡು ಕೆಲವು ದಿನಗಳಿಂದ ಅತಿಸಾರದಿಂದ (ಭೇದಿ) ಬಳಲುತ್ತಿದ್ದೇನೆ. ಜೈಲಿನ ಆರೋಗ್ಯಾಧಿಕಾರಿಗಳು ತಮ್ಮ ಆರೋಗ್ಯ ಪರಿಶೀಲಿಸಿದಾಗ ತಾವು ಸೇವಿಸಿದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮ ಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ತಮ್ಮ ತೂಕ ಸಹ ಕಡಿಮೆಯಾಗಿದೆ. ಇದರಿಂದ ಜೈಲಿನಲ್ಲಿ ವಿತರಣೆ ಮಾಡುತ್ತಿರುವ ಆಹಾರ ಸೇವನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಒದಗಿದೆ ಎಂದು ದರ್ಶನ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಬಂಧೀಖಾನೆ ಕಾಯ್ದೆ-1962ರ ಸೆಕ್ಷನ್ 30ರ ಪ್ರಕಾರ ವಿಚಾರಣಾಧೀನ ಕೈದಿಗಳು ಜೈಲು ಅಧಿಕಾರಿಗಳ ಅನುಮತಿಯೊಂದಿಗೆ ಹೊರಗಡೆಯಿಂದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಇನ್ನೂ ವಿಚಾರಣಾಧೀನ ಕೈದಿಗಳೂ ತಮ್ಮ ಕುಟುಂಬ ಸದಸ್ಯರ ಮನೆಯಿಂದ ಊಟ, ಹಾಸಿಗೆ, ಬಟ್ಟೆ, ಪುಸ್ತಕಗಳು ಮತ್ತು ಪತ್ರಿಕೆಗಳು ತರಿಸಿಕೊಂಡರೆ ಸರ್ಕಾರದ ಖಜಾನೆಗೆ ಉಂಟಾಗುವ ವೆಚ್ಚ ಸಹ ಉಳಿಯಲಿದೆ. ಮನೆ ಆಹಾರ ಪಡೆಯಲು ನನಗೆ ಅನುಮತಿ ನಿರಾಕರಿಸಿರುವ ಜೈಲು ಅಧಿಕಾರಿಗಳ ಕ್ರಮ ಅಮಾನವೀಯವಾಗಿದೆ. ಸಂವಿಧಾನದ ಪರಿಚ್ಛೇದ 21ರಡಿ ಲಭ್ಯವಾಗಿರುವ ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ದರ್ಶನ್ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜೂ.22ರಿಂದ ದರ್ಶನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ಅಲ್ಲದೆ, ಮನೆಯಿಂದ ಆಹಾರ, ಬಟ್ಟೆ, ಹಾಸಿಗೆ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೆ, ಕುಟುಂಬ ಸದಸ್ಯರಿಂದ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈಗಾಗಲೇ ನಾನು ದೊಡ್ಡ ಪ್ರಮಾಣವಾಗಿ ತೂಕ ಕಳೆದುಕೊಳ್ಳುತ್ತಿದ್ದೇನೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ದರ್ಶನ್ ವಿವರಿಸಿದ್ದಾರೆ.