ಕಡಿಮೆ ಬಡ್ಡಿ ಆಸೆ ತೋರಿಸಿ ಚಿನ್ನ ಗೋಲ್‌ಮಾಲ್..!

| Published : Jul 10 2025, 12:45 AM IST

ಸಾರಾಂಶ

ನೀವು ಚಿನ್ನವನ್ನು ದುಬಾರಿ ಬಡ್ಡಿಗೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದೀರಾ. ನಿಮ್ಮ ಚಿನ್ನವನ್ನು ನಾವು ಬಿಡಿಸಿಕೊಟ್ಟು ಕಡಿಮೆ ಬಡ್ಡಿಗೆ ಸಾಲ ನೀಡುತ್ತೇವೆ. ನಿಮ್ಮ ಚಿನ್ನಕ್ಕೆ ನಾವು ಗ್ಯಾರಂಟಿ...! ಹೀಗೆ ಮಹಿಳೆಯೊಬ್ಬರು ನಿಮಗೆ ಕರೆ ಮಾಡಿ ಹೇಳಿದರೆ ಮೋಸ ಹೋಗಬೇಡಿ. ಒಮ್ಮೆ ಕಡಿಮೆ ಬಡ್ಡಿ ಆಸೆಗೊಳಗಾಗಿ ಚಿನ್ನವನ್ನು ತೆಗೆದು ಕರೆ ಮಾಡಿದ ಮಹಿಳೆಯ ಬ್ಯಾಂಕ್‌ನಲ್ಲಿ ಅಡವಿಟ್ಟರೆ ಅಲ್ಲಿಗೆ ನೀವು ಚಿನ್ನವನ್ನು ಕಳೆದುಕೊಂಡಂತೆಯೇ...!

ಕನ್ನಡಪ್ರಭ ವಾರ್ತೆ ಮಂಡ್ಯ

ನೀವು ಚಿನ್ನವನ್ನು ದುಬಾರಿ ಬಡ್ಡಿಗೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದೀರಾ. ನಿಮ್ಮ ಚಿನ್ನವನ್ನು ನಾವು ಬಿಡಿಸಿಕೊಟ್ಟು ಕಡಿಮೆ ಬಡ್ಡಿಗೆ ಸಾಲ ನೀಡುತ್ತೇವೆ. ನಿಮ್ಮ ಚಿನ್ನಕ್ಕೆ ನಾವು ಗ್ಯಾರಂಟಿ...!

- ಹೀಗೆ ಮಹಿಳೆಯೊಬ್ಬರು ನಿಮಗೆ ಕರೆ ಮಾಡಿ ಹೇಳಿದರೆ ಮೋಸ ಹೋಗಬೇಡಿ. ಒಮ್ಮೆ ಕಡಿಮೆ ಬಡ್ಡಿ ಆಸೆಗೊಳಗಾಗಿ ಚಿನ್ನವನ್ನು ತೆಗೆದು ಕರೆ ಮಾಡಿದ ಮಹಿಳೆಯ ಬ್ಯಾಂಕ್‌ನಲ್ಲಿ ಅಡವಿಟ್ಟರೆ ಅಲ್ಲಿಗೆ ನೀವು ಚಿನ್ನವನ್ನು ಕಳೆದುಕೊಂಡಂತೆಯೇ.

ಗ್ರಾಹಕರಿಗೆ ಕಡಿಮೆ ಬಡ್ಡಿ ಆಸೆ ತೋರಿಸಿ ವಂಚಿಸುತ್ತಿದ್ದ ಆರೋಪದ ಮೇಲೆ ಇಲ್ಲಿನ ಸುಭಾಷ್ ನಗರದ ವಿನೋಬಾ ರಸ್ತೆಯಲ್ಲಿರುವ ಅನಘಾ ಗೋಲ್ಡ್‌ನ ಮಾಲೀಕ ಪ್ರವೀಣ್, ಪತ್ನಿ ಮಂಜುಳಾ ಹಾಗೂ ಸಿಬ್ಬಂದಿ ಶ್ರೀಲಕ್ಷ್ಮೀ ಅವರನ್ನು ಪಶ್ಚಿಮಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಮೂವರು ಚಿನ್ನವನ್ನು ಅಡವಿಟ್ಟ ಗ್ರಾಹಕರಿಗೆ ಕರೆ ಮಾಡಿ ಅವರನ್ನು ಮರುಳು ಮಾಡುತ್ತಿದ್ದರು. ಬ್ಯಾಂಕ್‌ಗಳಲ್ಲಿ, ಖಾಸಗಿ ಫೈನಾನ್ಸ್‌ಗಳಲ್ಲಿ ಇಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು ಬಂದು ತಮ್ಮಲ್ಲಿ ಅಡವಿಟ್ಟುಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ಆ ಚಿನ್ನವನ್ನು ಕರಗಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಬಂದ ಹಣವನ್ನು ಮೂವರು ಸಮನಾಗಿ ಹಂಚಿಕೊಂಡು ವಂಚಿಸುತ್ತಿದ್ದುದು ಬೆಳಕಿಗೆ ಬಂದಿದೆ.

೩ ಕೋಟಿ ರು. ಮೌಲ್ಯದ ಚಿನ್ನ ಕರಗಿಸಿ ಮಾರಾಟ:

ಬಂಧಿತರು ಸುಮಾರು ೩ ಕೋಟಿ ರು. ಮೌಲ್ಯದ ೨ ಕೆಜಿಯಷ್ಟು ಚಿನ್ನವನ್ನು ಗ್ರಾಹಕರಿಂದ ಅಡವಿಟ್ಟುಕೊಂಡು ಅದನ್ನು ಕರಗಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ವಂಚನೆ ಮಾಡಿದ್ದಾರೆ. ಜಿಲ್ಲೆಯ ಸುಮಾರು ೭೦ಕ್ಕೂ ಹೆಚ್ಚು ಮಂದಿ ವಂಚನೆಯ ಜಾಲಕ್ಕೆ ಸಿಲುಕಿದ್ದರೂ ದೂರು ಕೊಡುವುದಕ್ಕೆ ಯಾರೂ ಮುಂದಾಗಿರಲಿಲ್ಲ. ಶ್ರೀಧರ್ ಎಂಬುವರು ಅನಘ ಗೋಲ್ಡ್‌ನಲ್ಲಿ ೫೯೫ ಗ್ರಾಂ ಚಿನ್ನವನ್ನು ಅಡವಿಟ್ಟು ಮೋಸ ಹೋಗಿದ್ದರಿಂದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದರು.

ಆನಂತರ ಪೊಲೀಸರ ತನಿಖೆ ಕೈಗೊಂಡಾಗ ವಂಚನೆಗೊಳಗಾದ ಗ್ರಾಹಕರು ದೂರು ನೀಡಲು ಮುಂದಾಗಿದ್ದಾರೆ. ಇದೀಗ ೧೩ ಮಂದಿ ಗ್ರಾಹಕರು ದೂರು ನೀಡಿದ್ದು, ಮೊದಲ ದೂರಿನ ಆಧಾರದ ಮೇಲೆ ಪಶ್ಚಿಮಠಾಣೆ ಪೊಲೀಸರು ಪ್ರವೀಣ್ ಹಾಗೂ ಆತನ ಪತ್ನಿ ಸೇರಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

ಗ್ರಾಹಕರಿಂದ ಅನಘಾ ಗೋಲ್ಡ್‌ನವರು ಪಡೆದುಕೊಂಡಿದ್ದ ೨ ಕೆಜಿ ಚಿನ್ನದಲ್ಲಿ ಇದುವರೆಗೆ ೫೨೫ ಗ್ರಾಂ ಚಿನ್ನವನ್ನು ಮಾತ್ರ ಪೊಲೀಸರು ವಶಪಡಿಸಿಕೊಂಡಿದ್ದು, ಅದನ್ನು ೧೩ ಜನರಿಗೆ ಹಿಂತಿರುಗಿಸಿದ್ದಾರೆ. ಉಳಿಕೆ ಚಿನ್ನವನ್ನು ೬೦ಕ್ಕೂ ಹೆಚ್ಚು ಮಂದಿಗೆ ವಾಪಸ್ ದೊರಕಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಒಪ್ಪಂದ ಪತ್ರ ಓದಿರಲಿಲ್ಲ:

ಗ್ರಾಹಕರು ಅನಘಾ ಗೋಲ್ಡ್‌ನಲ್ಲಿ ಚಿನ್ನವನ್ನು ಅಡಮಾನ ಮಾಡುವ ಸಮಯದಲ್ಲಿ ಒಪ್ಪಂದ ಪತ್ರವನ್ನು ಓದುತ್ತಿರಲಿಲ್ಲ. ಕಡಿಮೆ ಬಡ್ಡಿ ಆಸೆಗೆ ಮಾರುಹೋಗಿ ಮುಂದಿಟ್ಟ ಪತ್ರಗಳಿಗೆ ಸಹಿ ಹಾಕುತ್ತಿದ್ದರು. ಆ ಸಮಯದಲ್ಲಿ ಅವರು ನಮ್ಮಲ್ಲಿ ಚಿನ್ನವನ್ನು ಅಡವಿಟ್ಟ ೬ ತಿಂಗಳು ಅಥವಾ ಒಂದು ವರ್ಷದೊಳಗೆ ಚಿನ್ನವನ್ನು ಬಿಡಿಸಿಕೊಳ್ಳದಿದ್ದರೆ ಆ ಚಿನ್ನವನ್ನು ನಿಮಗೆ ವಾಪಸ್ ನೀಡಲಾಗುವುದಿಲ್ಲ ಎಂದು ಷರತ್ತು ವಿಧಿಸಿದ್ದುದು ಕಂಡುಬಂದಿದೆ. ಇದನ್ನು ಓದದ ಗ್ರಾಹಕರು ಸುಲಭವಾಗಿ ವಂಚನೆಯ ಜಾಲಕ್ಕೆ ಸಿಲುಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟೆಲಿಕಾಲರ್ ಮುಖಾಂತರ ಗ್ರಾಹಕರ ಸಂಪರ್ಕ:

ಚಿನ್ನವನ್ನು ಅಡಮಾನ ಮಾಡಿಕೊಳ್ಳುವುದಕ್ಕಾಗಿ ಗ್ರಾಹಕರನ್ನು ಟೆಲಿಕಾಲರ್ ಮುಖಾಂತರ ಸಂಪರ್ಕಿಸುತ್ತಿದ್ದರು. ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಚಿನ್ನದ ಮೇಲೆ ಶೇ.೧ ರಿಂದ ೨ ಹಾಗೂ ಖಾಸಗಿ ಫೈನಾನ್ಸ್‌ಗಳಲ್ಲಿ ಶೇ.೩ ರಿಂದ ೪ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಅನಘಾ ಗೋಲ್ಡ್‌ನವರು ಕಡಿಮೆ ಬಡ್ಡಿ ಅಂದರೆ ಬ್ಯಾಂಕ್‌ಗಳಿಗಿಂತ ೬೦ ಪೈಸೆ, ೪೦ ಪೈಸೆ ಬಡ್ಡಿ ದರದಲ್ಲಿ ಚಿನ್ನ ಅಡವಿಡಬಹುದು ಎಂದು ಗ್ರಾಹಕರನ್ನು ನಂಬಿಸುತ್ತಿದ್ದರು. ಕಡಿಮೆ ಬಡ್ಡಿ ಎಂದು ಗ್ರಾಹಕರು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ತಮ್ಮ ಕಂಪನಿಯಲ್ಲಿ ಅಡಮಾನ ಮಾಡುತ್ತಿದ್ದರು. ಗ್ರಾಹಕರಿಂದ ಚಿನ್ನ ಪಡೆದ ಕೆಲವೇ ದಿನಗಳಲ್ಲಿ ಮೈಸೂರಿನಲ್ಲಿ ಚಿನ್ನವನ್ನು ಕರಗಿಸಿ ಮೂವರು ಆರೋಪಿಗಳು ಚಿನ್ನವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಅಡವಿಟ್ಟ ಚಿನ್ನಕ್ಕೆ ಶೇ.೭೦ರಷ್ಟು ಹಣ ಪಾವತಿ:

ಕಡಿಮೆ ಬಡ್ಡಿ ಆಸೆಗೆ ಚಿನ್ನವನ್ನು ಅಡವಿಡಲು ಬರುವ ಗ್ರಾಹಕರಿಗೆ ಆರೋಪಿಗಳು ಶೇ.೭೦ರಿಂದ ೮೦ರಷ್ಟು ಮಾತ್ರ ಹಣ ನೀಡುತ್ತಿದ್ದರು. ಅಡಮಾನವಿಟ್ಟ ಚಿನ್ನಕ್ಕೆ ಹಣ ಕಟ್ಟಿ ಬಿಡಿಸಿಕೊಳ್ಳಲು ಬರುವವರಿಗೆ ಏನಾದರೂ ಕುಂಟು ನೆಪ, ಸಬೂಬು ಹೇಳಿ ಕಳುಹಿಸುತ್ತಿದ್ದರು. ಹಣ ಕಟ್ಟಿಸಿಕೊಳ್ಳುವುದಕ್ಕೆ ವಿಳಂಬ ಮಾಡುತ್ತಿದ್ದರು. ಚಿನ್ನ ಕೊಡುವಂತೆ ಗ್ರಾಹಕರಿಂದ ಒತ್ತಡ ಹೆಚ್ಚಿದ್ದರಿಂದ ಕೊನೆಗೆ ಅಂಗಡಿಯ ಬಾಗಿಲನ್ನೇ ಬಂದ್ ಮಾಡಿ ಮೈಸೂರು ಸೇರಿಕೊಂಡಿದ್ದರು. ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

ಗ್ರಾಹಕರ ಅಲೆದಾಟ:

ಚಿನ್ನ ಬಿಡಿಸಿಕೊಳ್ಳಲು ಬರುವ ಗ್ರಾಹಕರಿಗೆ ಪ್ರತಿನಿತ್ಯ ಏನಾದರೂ ಒಂದು ಸಬೂಬು ಹೇಳಿ ಸಾಗ ಹಾಕುತ್ತಿದ್ದರು. ಗ್ರಾಹಕರು ವರ್ಷಗಟ್ಟಲೇ ಅಲೆದಾಡುವಂತಾಗಿತ್ತು. ಇದರಿಂದ ಬೇಸತ್ತ ಗ್ರಾಹಕ ಶ್ರೀಧರ್ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ದೊಡ್ಟಮಟ್ಟದ ಚಿನ್ನ ವಂಚನೆಯ ಜಾಲ ಬೆಳಕಿಗೆ ಬಂದಿದೆ.ಚಿನ್ನ ವಂಚನೆ ಪ್ರಕರಣದಲ್ಲಿ ಶ್ರೀಧರ್ ಅವರು ನೀಡಿದ ದೂರನ್ನು ಆಧರಿಸಿ ಮೂವರನ್ನು ಬಂಧಿಸಲಾಗಿದೆ. ೭೦ಕ್ಕೂ ಹೆಚ್ಚು ಜನರಿಗೆ ಸೇರಿದ ೩ ಕೋಟಿ ರು. ಮೌಲ್ಯದ ಸುಮಾರು ೨ ಕೆಜಿ ಚಿನ್ನವನ್ನು ಗ್ರಾಹಕರಿಗೆ ವಂಚಿಸಿದ್ದಾರೆ. ಬಂಧಿತರಿಂದ ೫೨೫ ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಆರೋಪಿಗಳ ವಿರುದ್ಧ ೧೩ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

-ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ