ಸಿಗ್ನಲ್‌ನಲ್ಲಿ ಸಿಂತಿದ್ದ ವಾಹನಗಳಿಗೆ ಗೂಡ್ಸ್‌ ಈಚರ್ ಡಿಕ್ಕಿ: ಓರ್ವ ಮೃತ

| N/A | Published : May 01 2025, 01:46 AM IST / Updated: May 01 2025, 04:38 AM IST

Dhar road accident
ಸಿಗ್ನಲ್‌ನಲ್ಲಿ ಸಿಂತಿದ್ದ ವಾಹನಗಳಿಗೆ ಗೂಡ್ಸ್‌ ಈಚರ್ ಡಿಕ್ಕಿ: ಓರ್ವ ಮೃತ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪು ದೀಪ ಬೆಳಗಿದ ಕಾರಣಕ್ಕೆ ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂದಿನಿಂದ ಸರಕು ಸಾಗಾಣಿಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಮೃತರ ಪತ್ನಿ ಸೇರಿದಂತೆ ಕೆಲವರು ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

  ಬೆಂಗಳೂರು : ಕೆಂಪು ದೀಪ ಬೆಳಗಿದ ಕಾರಣಕ್ಕೆ ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಹಿಂದಿನಿಂದ ಸರಕು ಸಾಗಾಣಿಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು, ಮೃತರ ಪತ್ನಿ ಸೇರಿದಂತೆ ಕೆಲವರು ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಜಕ್ಕೂರಿನ ಎಂಸಿಇಎಚ್‌ಎಸ್ ಲೇಔಟ್‌ನ ಕುಮಾರ್ ಬಾಬು (58) ಮೃತರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೃತರ ಪತ್ನಿ ವರಲಕ್ಷ್ಮೀ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಾದರಹಳ್ಳಿ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕಾರುಗಳು ಸೇರಿದಂತೆ ಆರಕ್ಕೂ ಹೆಚ್ಚಿನ ವಾಹನಗಳು ಜಖಂಗೊಂಡಿವೆ. ಸರಕು ಸಾಗಾಣಿಕೆ ವಾಹನ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಸಿಇಎಚ್‌ಎಸ್‌ ಲೇಔಟ್‌ನಲ್ಲಿ ವಾಸಿಸುವ ಕುಮಾರ್‌ ದಂಪತಿ ಬಸವ ಜಯಂತಿ ಪ್ರಯುಕ್ತ ದೇವಾಲಯಕ್ಕೆ ತೆರಳುತ್ತಿದ್ದರು. ಆಗ ಸಾದರಹಳ್ಳಿ ಗೇಟ್‌ನ ಸಿಗ್ನಲ್‌ನಲ್ಲಿ ಕೆಂಪು ದೀಪ ಬೆಳಗಿದ ಪರಿಣಾಮ ಕಾರನ್ನು ಅವರು ನಿಲ್ಲಿಸಿದ್ದರು. ಅದೇ ವೇಳೆ ಹಿಂದಿನಿಂದ ಅತಿವೇಗವಾಗಿ ಬಂದ ಈಚರ್ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಕುಮಾರ್ ಅವರ ಕಾರು ಸೇರಿದಂತೆ 6 ವಾಹನಗಳಿಗೆ ಒಂದಕ್ಕೊಂದು ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಕುಮಾರ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಈ ಗಾಯಾಳುಗಳ ಪೈಕಿ ಕುಮಾರ್ ಪತ್ನಿ ವರಲಕ್ಷ್ಮೀ ಅವರಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ಹೊತ್ತು ಸಂಚಾರ ದಟ್ಟಣೆ:

ಸಾದರಹಳ್ಳಿ ಗೇಟ್ ಬಳಿ ಸಂಭವಿಸಿದ ಸರಣಿ ಅಪಘಾತದಿಂದ ಕೆಲಹೊತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಪಘಾತಕ್ಕೀಡಾಗಿದ್ದ ವಾಹನಗಳನ್ನು ತೆರವುಗೊಳಿಸಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.