ಟ್ಯಾಂಕರ್‌ ಡಿಕ್ಕಿ : ಚಿನ್ನಾಭರಣ ಮಳಿಗೆಯ ಕೆಲಸಗಾರ ಸಾವು

| N/A | Published : May 01 2025, 01:45 AM IST / Updated: May 01 2025, 04:39 AM IST

ಸಾರಾಂಶ

ಮುಂಜಾನೆ ಕೆಲಸಕ್ಕೆ ತೆರಳುವಾಗ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಚಿನ್ನಾಭರಣ ಮಾರಾಟ ಮಳಿಗೆ ಕೆಲಸಗಾರನೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಮುಂಜಾನೆ ಕೆಲಸಕ್ಕೆ ತೆರಳುವಾಗ ಮಾರ್ಗ ಮಧ್ಯೆ ಅಪಘಾತಕ್ಕೀಡಾಗಿ ಚಿನ್ನಾಭರಣ ಮಾರಾಟ ಮಳಿಗೆ ಕೆಲಸಗಾರನೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀರಾಮಪುರದ ನಿವಾಸಿ ಹರ್ಷ (16) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ಸಚಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ನ್ಯೂ ಬಿಇಎಲ್ ರಸ್ತೆಯ ಚಿನ್ನಾಭರಣ ಮಾರಾಟ ಮಳಿಗೆಗೆ ಬೈಕ್‌ನಲ್ಲಿ ಈ ಗೆಳೆಯರು ಹೋಗುವಾಗ ಮಲ್ಲೇಶ್ವರದ ಐಐಎಸ್‌ಸಿ ಅಂಡರ್ ಪಾಸ್ ಬಳಿ ಹಾಲಿನ ಕ್ಯಾಂಟರ್ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಹರ್ಷ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀರಾಮಪುರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಹರ್ಷ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದನು. ನ್ಯೂ ಬಿಇಎಲ್‌ ರಸ್ತೆಯ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ಆತ ಕೆಲಸ ಮಾಡುತ್ತಿದ್ದ. ಅಕ್ಷಯ ತೃತೀಯ ದಿನವಾದ ಬುಧವಾರ ವಹಿವಾಟು ಆರಂಭಿಸಲು ಮಳಿಗೆಯನ್ನು ಮುಂಜಾನೆಯೇ ತೆರೆಯಲಿದ್ದರು. ಹೀಗಾಗಿ ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಹರ್ಷ ತೆರಳುತ್ತಿದ್ದ ವೇಳೆ ಮಲ್ಲೇಶ್ವರದ ಮಾರಮ್ಮ ಸರ್ಕಲ್ ದಾಟಿ ಐಐಎಸ್‌ಸಿ ಜಂಕ್ಷನ್‌ನ ಅಂಡರ್ ಪಾಸ್ ಬಳಿ ಸರ್ವೀಸ್ ರಸ್ತೆಗೆ ಬೈಕ್ ತಿರುಗಿಸುವಾಗ ಹಾಲಿನ ಕ್ಯಾಂಟರ್‌ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಹರ್ಷ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.