ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ 16 ಜನರ ಗುಂಪೊಂದು ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಿ ಗೂಂಡಾ ವರ್ತನೆ

| N/A | Published : Mar 29 2025, 01:47 AM IST / Updated: Mar 29 2025, 04:35 AM IST

KSRP
ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ 16 ಜನರ ಗುಂಪೊಂದು ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಿ ಗೂಂಡಾ ವರ್ತನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ 16 ಜನರ ಗುಂಪೊಂದು ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಿ ಗೂಂಡಾ ವರ್ತನೆ ತೋರಿದ ಆರೋಪದಡಿ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬೆಂಗಳೂರು :  ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿದ 16 ಜನರ ಗುಂಪೊಂದು ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕಿ ಗೂಂಡಾ ವರ್ತನೆ ತೋರಿದ ಆರೋಪದಡಿ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಲ್ಲಾಳ ಮುಖ್ಯರಸ್ತೆಯ ಮಲ್ಲತ್ತಹಳ್ಳಿಯ ಅನ್ನಪೂರ್ಣೇಶ್ವರಿನಗರದ ನಿವೇಶನದಲ್ಲಿ ಮಾ.27ರಂದು ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ರೆನಿಲ್‌ ಕುಮಾರ್‌ ನೀಡಿದ ದೂರಿನ ಮೇರೆಗೆ ನರೇಂದ್ರ ಹಾಗೂ ಇತರ ಹದಿನೈದು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?:

-ನಮ್ಮ ತಂದೆ ರಾಮಚಂದ್ರ ನಾಯರ್‌ ಅವರು 2002ನೇ ಸಾಲಿನಲ್ಲಿ ಉಲ್ಲಾಳ ಮುಖ್ಯರಸ್ತೆಯ ಮಲ್ಲತ್ತಹಳ್ಳಿ ಅನ್ನಪೂರ್ಣೇಶ್ವರಿನಗರದಲ್ಲಿ ಲತಾ ಎಂಬುವವರಿಂದ ನಿವೇಶನ ಖರೀದಿಸಿದ್ದರು. ನಂತರ 2003ರಲ್ಲಿ ಆ ನಿವೇಶನದಲ್ಲಿ ಶೀಟ್‌ ಮನೆ ನಿರ್ಮಿಸಿ ಬಾಡಿಗೆಗೆ ನೀಡಿದ್ದೆವು. ಆ ನಿವೇಶನಕ್ಕೆ ಪ್ರತಿ ವರ್ಷ ಕಂದಾಯ ಪಾವತಿಸುತ್ತಿದ್ದೇವೆ. 2008ರಲ್ಲಿ ನನ್ನ ತಂದೆ ರಾಮಚಂದ್ರ ನಾಯರ್‌ ಮೃತಪಟ್ಟ ಹಿನ್ನೆಲೆಯಲ್ಲಿ ಆ ನಿವೇಶನವನ್ನು ತಾಯಿ ಗೀತಾ ನಾಯರ್‌ ಹೆಸರಿಗೆ ನೋಂದಣಿ ಮಾಡಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಈ ನಿವೇಶನಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಈ ನಡುವೆ ಮಾ.27ರಂದು ರಾತ್ರಿ ನರೇಂದ್ರ ಹಾಗೂ ಅವರ 15 ಮಂದಿ ಸಹಚರರು ನಮ್ಮ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಶೀಟ್‌ ಮನೆಯಲ್ಲಿ ವಾಸವಿದ್ದ ಉಮಾ ಅಂಬಲಪ್ಪ ಅವರನ್ನು ಮನೆಯಿಂದ ಹೊರಗೆ ಹಾಕಿ, ಸಾಮಾನುಗಳನ್ನು ಹೊರಗೆ ಎಸೆದಿದ್ದಾರೆ. ಬಳಿಕ ನಿವೇಶನಕ್ಕೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾನಿಗೊಳಿಸಿ, ಡಿವಿಆರ್‌ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ನರೇಂದ್ರ ಹಾಗೂ ಅವರ ಸಹಚರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರೆನಿಲ್‌ ಕುಮಾರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಎಸಿಪಿ, ಪಿಐ ವಿರುದ್ಧಲಂಚದ ಆರೋಪ

ಈ ಪ್ರಕರಣದಲ್ಲಿ ಆರೋಪಿ ನರೇಂದ್ರ ಹಾಗೂ ಅವರ ಸಹಚರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕೆಂಗೇರಿ ಉಪವಿಭಾಗದ ಎಸಿಪಿ ಬಸವರಾಜ್‌ ಅಲ್ಲಪ್ಪ ತೇಲಿ ಮತ್ತು ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್‌ ಎಂ.ಎಸ್‌.ರವಿ ₹20 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಧಿಕೃತ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.