ಬೆಂಗಳೂರು : ಸರ್ಕಾರಿ ಭೂ ಒತ್ತುವರಿ ಮಾಡಿ ಶಾಲೆ ನಿರ್ಮಾಣ: ನೋಟಿಸ್‌

| Published : Apr 05 2024, 01:46 AM IST / Updated: Apr 05 2024, 05:16 AM IST

ಸಾರಾಂಶ

ನಗರದ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಾಣ ಮಾಡಿದೆ ಎಂಬ ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

 ಬೆಂಗಳೂರು : ನಗರದ ಆನೇಕಲ್ ತಾಲೂಕಿನ ತಿರುಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಾಣ ಮಾಡಿದೆ ಎಂಬ ಆರೋಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತಂತೆ ಸ್ಥಳೀಯರಾದ ಟಿ.ಎನ್.ಸಂಪಂಗಿರಾಮ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರ ಪರ ವಕೀಲ ವಾದ ಆಲಿಸಿದ ಬಳಿಕ ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಆನೇಕಲ್‌ ತಹಸೀಲ್ದಾರ್‌ ಮತ್ತು ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನಲಾದ ತಿರುಪಾಳ್ಯ ನಿವಾಸಿ ಟಿ.ಕೃಷ್ಣ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ತಿರುಪಾಳ್ಯ ಗ್ರಾಮದ ಸರ್ವೇ ನಂ 2/15ರಲ್ಲಿನ ಒಟ್ಟು 8 ಎಕರೆ 12 ಗುಂಟೆ ಜಮೀನನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ರಸ್ತೆ ಮತ್ತು ಮತ್ತು ಕೆಪಿಟಿಸಿಎಲ್‌ಗಾಗಿ ಸರ್ಕಾರ ಮೀಸಲು ಇಟ್ಟಿತ್ತು. ಅದರಲ್ಲಿ ಎರಡು ಎಕರೆ ಜಮೀನನ್ನು ಟಿ.ಕೃಷ್ಣ ಅವರು ಒತ್ತುವರಿ ಮಾಡಿದ್ದಾರೆ. ಸೂರ್ಯೋದಯ ಎಜುಕೇಷನ್‌ ಟ್ರಸ್ಟ್‌ ಹೆಸರಿಡಿಯಲ್ಲಿ ಶಾಲಾ ಹಾಗೂ ದೇವಸ್ಥಾನ ಕಟ್ಟಡ ನಿರ್ಮಿಸಿ, ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಸರ್ಕಾರಿ ಜಮೀನು ಒತ್ತುವರಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಟಿ.ಕೃಷ್ಣ ಅವರಿಂದ ನಡೆದಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಒತ್ತುವರಿ ಆಗಿರುವ ಜಾಗದಲ್ಲಿ ಸೂರ್ಯೋದಯ ಎಜುಕೇಷನಲ್ ಟ್ರಸ್ಟ್‌ ವತಿಯಿಂದ ಶಾಲೆ ಮುಂದುವರಿಯದಂತೆ ಹಾಗೂ ಮುಂದಿನ ಯಾವುದೇ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡದಂತೆ ಸರ್ಕಾರಕ್ಕೆ ಆದೇಶಿಸಬೇಕು. ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.