ಸಾರಾಂಶ
ಬೆಂಗಳೂರು : ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸಂಘಟಿತ ಅಪರಾಧ ದಳದ ಅಧಿಕಾರಿಗಳು ಕುಖ್ಯಾತ ರೌಡಿ ಶೀಟರ್ ಭರತ್ ಕುಮಾರ್ ಅಲಿಯಾಸ್ ಗುಡ್ಡೆ ಭರತ (25) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಮೈಸೂರು ರಸ್ತೆ ಎನ್‌ಟಿವೈ ಲೇಔಟ್ ನಿವಾಸಿ ರೌಡಿ ಭರತ್ ಕಳೆದ 8 ವರ್ಷದಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು, ಈತನ ವಿರುದ್ಧ ಕೊಲೆಗೆ ಯತ್ನ, ಹಲ್ಲೆ, ಸುಲಿಗೆ, ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯ, ಡ್ರಗ್ಸ್ ಮಾರಾಟ ಸೇರಿದಂತೆ 9 ವಿವಿಧ ಪ್ರಕರಣಗಳು ದಾಖಲಾಗಿವೆ. ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಹೀಗಾಗಿ ಸಿಸಿಬಿ ಅಧಿಕಾರಿಗಳು ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಗೂಂಡಾ ಕಾಯ್ದೆಯಡಿ ಬಂಧಿಸಲು ಅನುಮತಿ ಕೋರಿ ನಗರ ಪೊಲೀಸ್ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ನಗರ ಪೊಲೀಸ್ ಆಯುಕ್ತರಿಂದ ಅನುಮತಿ ಸಿಕ್ಕ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ರೌಡಿ ಭರತ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.