ಸಾರಾಂಶ
ಬೆಂಗಳೂರು : ಚಲನಚಿತ್ರ ನಿರ್ಮಾಣಕ್ಕೆ ನೆರವಿನ ಆಮಿಷವೊಡ್ಡಿ ಬಲವಂತದಿಂದ ಮದುವೆಯಾಗಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡಿ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪತ್ನಿ ಹಾಗೂ ಯೂಟ್ಯೂಬ್ ಪತ್ರಕರ್ತನ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ನಿರ್ದೇಶಕರೊಬ್ಬರು ದೂರು ನೀಡಿದ್ದಾರೆ.
ಬೊಮ್ಮಸಂದ್ರ ನಿವಾಸಿ ಚಲನಚಿತ್ರ ನಿರ್ದೇಶಕ ಹರ್ಷವರ್ಧನ್ ದೂರಿನ ಮೇರೆಗೆ ಅವರ ಪತ್ನಿ ಹಾಗೂ ಚಲನಚಿತ್ರ ನಿರ್ಮಾಪಕಿ ಶಶಿಕಲಾ ಅಲಿಯಾಸ್ ಸುಶೀಲಮ್ಮ ಹಾಗೂ ಆಕೆಯ ಸ್ನೇಹಿತ ಯೂಟ್ಯೂಬರ್ ಅರುಣ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪದ ವಿವರ: ಮೊದಲು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಸಿನಿಮಾ ರಂಗದಲ್ಲಿ ನಿರ್ದೇಶಕ ಮತ್ತು ನಟನಾಗಲು ಪ್ರಯತ್ನಿಸುವಾಗ ಡಿ ಎನ್.ವರದರಾಜು ಪರಿಚಯವಾದರು. ಬಳಿಕ ಇಬ್ಬರು ಪಾಲುದಾರಿಕೆಯಲ್ಲಿ 2020ರಲ್ಲಿ ಹೊಸ ಸಿನಿಮಾ ಶುರು ಮಾಡಿದೆವು. ಆಗ ಚಿತ್ರೀಕರಣಕ್ಕೆ ಕಲಾವಿದೆಯಾಗಿ ಬಂದ ಶಶಿಕಲಾ ಅಲಿಯಾಸ್ ಸುಶೀಲಮ್ಮ, ಪರಿಚಯ ಮಾಡಿಕೊಂಡು ತನ್ನ ಫೋನ್ ನಂಬರ್ ಅನ್ನು ಅವರೇ ಕೇಳಿ ಪಡೆದುಕೊಂಡರು. ಅದಾಗಲೇ ಆಕೆಗೆ ಮದುವೆಯಾಗಿ ಮಗ ಸಹ ಇದ್ದ. ಆದರೆ ನಿನ್ನ ಸಿನಿಮಾಕ್ಕೆ ಆರ್ಥಿಕ ನೆರವು ನೀಡುವುದಾಗಿ ಹೇಳಿ ಆಕೆ ಸಂಬಂಧ ಬೆಳೆಸಿದ್ದಳು. ಸಿನಿಮಾ ನಿರ್ಮಾಣದಾಸೆಯಿಂದ ಅವರನ್ನು ಒಪ್ಪಿಕೊಂಡೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಆದರೆ, ಮೊದಲೇ ಅವರಿಗೆ ನಿಮ್ಮನ್ನು ಮದುವೆಯಾಗಲು ಆಗುವುದಿಲ್ಲ ಎಂದಿದ್ದೆ. ಕೆಲ ದಿನಗಳ ನಂತರ ಶಶಿಕಲಾ ಮದುವೆಯಾಗುವಂತೆ ಒತ್ತಾಯಿಸಿದರು. ನಾನು ಮೊದಲೇ ಬೇಡ ಎಂದು ಹೇಳಿದ್ದೆ ಎಂದಿದ್ದಕ್ಕೆ ನೀನು ಮದುವೆ ಆಗಲಿಲ್ಲ ಎಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದರು. ನಂತರ ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಳು. ನಾನು ಜೈಲಿನಿಂದ ಹೊರ ಬರುವ ವೇಳೆಗೆ ಆಕೆ ಅಪಪ್ರಚಾರ ಮಾಡಿದ್ದಳು. ಕೊನೆಗೆ ಬೆದರಿಸಿ ತನ್ನನ್ನು ಆಕೆ ಮದುವೆಯಾದಳು. ನಂತರ ಆಕೆ ಕೇಸ್ ವಾಪಸ್ ಪಡೆದಳು. ಕೆಲ ದಿನಗಳ ಬಳಿಕ ಮತ್ತೆ ನನಗೆ ಕಿರುಕುಳ ನೀಡಲಾರಂಭಿಸಿದ್ದಳು. ಮನೆಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಎಂದು ಹೇಳಿ ಅಪರಿಚಿತ ವ್ಯಕ್ತಿಗಳು ಬರುತ್ತಿದ್ದರು. ಇದಕ್ಕೆ ಆಕ್ಷೇಪಿಸಿದ್ದರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಹೀಗಿರುವಾಗ ಗಂಗೊಡನಹಳ್ಳಿ ಬಳಿ ಅನಾಥಾಶ್ರಮ ಆರಂಭಿಸುವುದಾಗಿ ಆಕೆ ಹೇಳಿದ್ದಳು. ಈ ಬಗ್ಗೆ ವಿಚಾರಿಸಿದಾಗ ಕಪ್ಪು ಹಣ ಸಕ್ರಮಗೊಳಿಸುವ ಮಾರ್ಗ ಎಂದಿದ್ದಳು. ಸಿನಿಮಾಗಿಂತ ಹೆಚ್ಚು ದುಡ್ಡು ಸಂಪಾದನೆ ಮಾಡಬಹುದು ನಿನಗೂ ಸಿನಿಮಾ ಮಾಡಿಕೊಡುತ್ತೇನೆ ಎಂದು ಆಮಿಷವೊಡ್ಡಿದಳು.
ಬಳಿಕ ನನ್ನ ಹಾಗೂ ವಯಸ್ಸಾದ ನನ್ನ ತಾಯಿಯನ್ನು ಮನೆಯಿಂದ ಹೊರ ಹಾಕಿದಳು. ಬಳಿಕ ಮತ್ತೆ ಮನೆಗೆ ಬರುವಂತೆ ಆಕೆ ಧಮ್ಕಿ ಹಾಕಿದಳು. ನಾನು ಒಪ್ಪದೆ ಹೋದಾಗ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಮರ್ಯಾದೆ ಕಳೆಯುವುದಾಗಿ ಬೆದರಿಸಿದ್ದಳು. ಇದಕ್ಕೆ ನಾನು ಬಗ್ಗದೆ ಹೋದಾಗ ಅಪಪ್ರಚಾರ ಶುರು ಮಾಡಿದಳು. ಇದೀಗ ಯುಟ್ಯೂಬ್ ಚಾನೆಲ್‌ಗಳಲ್ಲಿ ವಾಯ್ಸ್ ಮೆಸೇಜ್‌ಗಳ ಮುಖಾಂತರ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ಈ ಕೃತ್ಯಕ್ಕೆ ಸಿನಿ ಬಝ್ ಹೆಸರಿನ ಯೂಟ್ಯೂಬ್ ಚಾನೆಲ್ ಮಾಲಿಕ ಅರುಣ್ ಕುಮಾರ್ ಸಾಥ್ ಕೊಟ್ಟಿದ್ದಾನೆ ಎಂದು ಹರ್ಷವರ್ಧನ್ ಆರೋಪಿಸಿದ್ದಾರೆ.