ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪತ್ನಿಯ ಶೀಲ ಶಂಕಿಸಿ ಕೊಲೆಗೈದು ಜೈಲು ಸೇರಿ ಜಾಮೀನು ಪಡೆದು ಹೊರಬಂದು ಬಳಿಕ ವಿಚಾರಣೆಗೆ ಹಾಜರಾಗದೆ ಬರೋಬ್ಬರಿ 31 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ನಿವಾಸಿ ಸುಬ್ರಮಣಿ ಅಲಿಯಾಸ್ ಹುಸೇನ್ ಸಿಕ್ಕಂದರ್(56) ಬಂಧಿತ. ಆರೋಪಿ 1993ರಲ್ಲಿ ಪತ್ನಿ ಸುಧಾ ಎಂಬಾಕೆಯನ್ನು ಹತ್ಯೆಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹೆಬ್ಬಾಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ 31 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರಂಭದಲ್ಲಿ ಹುಡುಕಾಡಿದ್ದ ಪೊಲೀಸರು ಬಳಿಕ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಹುಡುಕಾಟ ನಿಲ್ಲಿಸಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೇರಳ ಟು ಚಿಕ್ಕಮಗಳೂರು: ಪತ್ನಿಯ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಸುಬ್ರಮಣಿ ಬಳಿಕ ಕೇರಳಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಅನ್ಯಧರ್ಮದ ಆಚರಣೆಗಳು, ಪದ್ಧತಿಗಳನ್ನು ತಿಳಿದುಕೊಂಡು ತನ್ನ ಹೆಸರನ್ನು ಹುಸೇನ್ ಸಿಕ್ಕಂದರ್ ಎಂದು ಬದಲಿಸಿಕೊಂಡು ಸ್ಥಳೀಯರ ಸ್ನೇಹ ಸಂಪಾದಿಸಿ ಕೆಲ ಕಾಲ ಅಲ್ಲೇ ಉಳಿದುಕೊಂಡಿದ್ದ.
ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ವಾಸ್ತವ್ಯ ಬದಲಿಸಿದ್ದ ಆರೋಪಿಯು ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಎನ್ನಲಾಗಿದೆ.
ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಬಹಳ ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಸೂಚಿಸಿದ್ದರು.
ಅದರಂತೆ ಹೆಬ್ಬಾಳ ಠಾಣೆ ಪೊಲೀಸರು, ಸುಬ್ರಮಣಿಯ ಪತ್ತೆಗೆ ಮುಂದಾಗಿದ್ದರು. ಚಿಕ್ಕಮಗಳೂರಿನಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.