ಪಟಾಕಿ ಹಚ್ಚಿ ಡಬ್ಬಾ ಮೇಲೆ ಕುಳಿತು ಪ್ರಾಣ ಕಳಕೊಂಡ!

| Published : Nov 05 2024, 01:33 AM IST

ಪಟಾಕಿ ಹಚ್ಚಿ ಡಬ್ಬಾ ಮೇಲೆ ಕುಳಿತು ಪ್ರಾಣ ಕಳಕೊಂಡ!
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಹಬ್ಬದ ಪ್ರಯುಕ್ತ ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬದ ಪ್ರಯುಕ್ತ ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೊಟ್ಟಿಗೆರೆ ಸಮೀಪದ ವೀವರ್ಸ್‌ ಕಾಲೋನಿ ನಿವಾಸಿ ಶಬರಿ(32) ಮೃತ ದುರ್ದೈವಿ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡು ವೀವರ್ಸ್‌ ಕಾಲೋನಿ ನಿವಾಸಿಗಳಾದ ನವೀನ್‌ ಕುಮಾರ್‌, ದಿನಕರ್‌, ಸತ್ಯವೇಲು, ಕಾರ್ತಿಕ್‌, ಸತೀಶ್‌ ಹಾಗೂ ಸಂತೋಷ್‌ ಕುಮಾರ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?: ಮೃತ ಶಬರಿ ಮತ್ತು ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದು, ವೀವರ್ಸ್‌ ಕಾಲೋನಿಯ ನಿವಾಸಿಗಳಾಗಿದ್ದಾರೆ. ಗಾರೆ ಕೆಲಸ ಸೇರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಅ.31ರ ರಾತ್ರಿ ಸುಮಾರು 9 ಗಂಟೆಗೆ ಪಾನಮತ್ತ ಶಬರಿ ವೀವರ್ಸ್‌ ಕಾಲೋನಿಯ 3ನೇ ಅಡ್ಡರಸ್ತೆಯ ಅಂಥೋನಿ ಎಂಬುವವರ ಅಂಗಡಿ ಬಳಿ ಹೋಗಿದ್ದಾನೆ. ಈ ವೇಳೆ ಆರೋಪಿಗಳು ದೀಪಾವಳಿ ಪ್ರಯುಕ್ತ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಸ್ನೇಹಿತರು ಪಟಾಕಿ ಸಿಡಿಸುತ್ತಿರುವ ಸ್ಥಳಕ್ಕೆ ಶಬರಿ ತೆರಳಿದ್ದಾನೆ.

ಆಟೋ ಕೊಡಿಸುವ ಆಮಿಷ: ಈ ವೇಳೆ ಆರೋಪಿಗಳು ನಾವು ಡಬ್ಬದ ಕೆಳಗೆ ಪಟಾಕಿ ಹಚ್ಚುತ್ತೇವೆ. ನೀನು ಈ ಡಬ್ಬದ ಮೇಲೆ ಕುಳಿತರೇ ನಿನಗೆ ಆಟೋ ಕೊಡಿಸುತ್ತೇವೆ ಎಂದು ಪಾನಮತ್ತ ಶಬದಿಗೆ ಆಮಿಷವೊಡ್ಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಶಬರಿ ಇದಕ್ಕೆ ಒಪ್ಪಿಕೊಂಡಿದ್ದಾನೆ.

ಬಳಿಕ ಆರೋಪಿಗಳು ಭಾರೀ ಸ್ಪೋಟದ ಪಟಾಕಿಗಳನ್ನು ರಸ್ತೆಗೆ ಇರಿಸಿ, ಬಳಿಕ ಅದರ ಮೇಲೆ ತಲೆಕೆಳಗಾಗಿ ಡಬ್ಬವನ್ನು ಮುಚ್ಚಿ ಅದರ ಮೇಲೆ ಶಬರಿಯನ್ನು ಕೂರಿಸಿದ್ದಾರೆ.

ಖಾಸಗಿ ಭಾಗಗಳಿಗೆ ಗಂಭೀರ ಗಾಯ: ಬಳಿಕ ಆರೋಪಿಗಳು ಬತ್ತಿಗೆ ಬೆಂಕಿ ಹಚ್ಚಿ ದೂರಕ್ಕೆ ಓಡಿದ್ದಾರೆ. ಧೈರ್ಯದಿಂದ ಶಬರಿ ಡಬ್ಬದ ಮೇಲೆ ಕುಳಿತಿರುವಾಗ ಡಬ್ಬದ ಒಳಗೆ ಪಟಾಕಿಗಳು ಸಿಡಿದಿವೆ. ಪಟಾಕಿಗಳ ಸ್ಫೋಟಕ್ಕೆ ಶಬರಿಯ ತೊಡೆ, ಖಾಸಗಿ ಅಂಗಾಂಗಗಳು ಹಾಗೂ ವೃಷಣಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳು ಶಬರಿಯನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಪಟಾಕಿ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಬರಿ ಚಿಕಿತ್ಸೆ ಫಲಿಸದೆ ನ.2ರ ಸಂಜೆ ಸುಮಾರು 5.30ಕ್ಕೆ ಮೃತಪಟ್ಟಿದ್ದಾನೆ.

ಆರೋಪಿಗಳ ವಿಚಾರಣೆ: ಈ ಸಂಬಂಧ ಮೃತ ಶಬರಿ ತಾಯಿ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ನವೀನ್‌ ಕುಮಾರ್‌, ದಿನಕರ್‌, ಸತ್ಯವೇಲು, ಕಾರ್ತಿಕ್‌, ಸತೀಶ್‌ ಹಾಗೂ ಸಂತೋಷ್‌ ಕುಮಾರ್‌ ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.