ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಯುವ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ ತೋರಿದವ ಸೆರೆ

| N/A | Published : Feb 28 2025, 07:10 AM IST

Car Driving

ಸಾರಾಂಶ

ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್‌ ಯುವ ನಾಯಕಿಗೆ ಅಶ್ಲೀಲ ಸನ್ನೆ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್‌ ಯುವ ನಾಯಕಿಗೆ ಅಶ್ಲೀಲ ಸನ್ನೆ ಮಾಡಿ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರದ ನಿವಾಸಿ ಹರ್ಷ ಬಂಧಿತನಾಗಿದ್ದು, ಮೈಸೂರು ರಸ್ತೆಯ ಗೋಪಾಲನ್‌ ಮಾಲ್ ಬಳಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಅವರಿಗೆ ಅಸಭ್ಯ ವರ್ತನೆ ತೋರಿ ಪರಾರಿಯಾಗಿದ್ದ. ಈ ಬಗ್ಗೆ ‘ಎಕ್ಸ್’ ಜಾಲತಾಣದ ಮೂಲಕದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಕಾರಿನ ನೊಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಹಕಾರ ನಗರಕ್ಕೆ ಬುಧವಾರ ಮಧ್ಯಾಹ್ನ ಕಾರಿನಲ್ಲಿ ಅಕ್ಷತಾ ತೆರಳುತ್ತಿದ್ದರು. ಆ ವೇಳೆ ತಮ್ಮ ಕುಟುಂಬದ ಜತೆ ಮತ್ತೊಂದು ಕಾರಿನಲ್ಲಿ ಹೋಗುತ್ತಿದ್ದ ಹರ್ಷ, ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಅಕ್ಷತಾರವರ ಕಾರಿಗೆ ತನ್ನ ಕಾರನ್ನು ಸ್ಪರ್ಶಿಸಿದ್ದಾನೆ. ಆಗ ಅತಿವೇಗದ ಚಾಲನೆ ಬಗ್ಗೆ ಅಕ್ಷತಾ ಆಕ್ಷೇಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಕ್ಷತಾ ಅವರಿಗೆ ಮಧ್ಯದ ಬೆರಳು ತೋರಿಸಿ ಅಶ್ಲೀಲವಾಗಿ ಸನ್ನೆ ಮಾಡಿ ಕಾರು ನಿಲ್ಲಿಸದೆ ಆರೋಪಿ ತೆರಳಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ‘ಎಕ್ಸ್‌’ ಜಾಲತಾಣದಲ್ಲಿ ಪೊಲೀಸ್‌ ಆಯುಕ್ತರಿಗೆ ಟ್ಯಾಗ್ ಮಾಡಿ ವಿಡಿಯೋ ಸಮೇತ ಅಕ್ಷತಾ ದೂರು ನೀಡಿದರು. ಕೂಡಲೇ ಈ ದೂರಿಗೆ ಸ್ಪಂದಿಸಿದ ಚಾಮರಾಜಪೇಟೆ ಪೊಲೀಸರು, ಸಂತ್ರಸ್ತೆಯನ್ನು ಸಂಪರ್ಕಿಸಿ ಘಟನೆ ಕುರಿತು ಲಿಖಿತವಾಗಿ ದೂರು ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ಕಾರಿನ ನೊಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸದಲ್ಲಿದ್ದ ಹರ್ಷ, ತನ್ನ ಕುಟುಂಬದ ಜತೆ ವಿಜಯನಗರದಲ್ಲಿ ವಾಸವಾಗಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.