ಸಾರಾಂಶ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿ ನಾಲ್ವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಗೌಡಹಳ್ಳಿ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಶನಿವಾರ ಸಂಜೆ ಜರುಗಿದೆ.
ಶ್ರೀರಂಗಪಟ್ಟಣ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿ ನಾಲ್ವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಗೌಡಹಳ್ಳಿ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಶನಿವಾರ ಸಂಜೆ ಜರುಗಿದೆ.ಮೈಸೂರಿನಲ್ಲಿ ಆಯೋಜಿಸಿದ್ದ 2 ವರ್ಷಗಳ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಭಾವಹಿಸಿ ಬೆಂಗಳೂರಿಗೆ ಹಿಂದಿರುತ್ತಿದ್ದಾಗ ಬೆಂಗಾವಲು ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಮಳೆ ಬರುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆಯಿಂದ ಎಎಸ್‌ಐ ಮಹೇಶ್, ಸಿಬ್ಬಂದಿ ದಿನೇಶ್, ಜಯಲಿಂಗ ಹಾಗೂ ಕಾರ್ಕಿಕ್ ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಕ್ಷಣ ಡಿವೈಎಸ್ಪಿ ಶಾಂತಮಲ್ಲಪ್ಪ, ಇನ್ಸ್‌ಪೆಕ್ಟರ್ ಆನಂದ್‌ಕುಮಾರ್, ಸಿಬ್ಬಂದಿ ರಾಜೇಶ್, ಅರುಣ್, ಸಂತೋಷ್ ಸೇರಿದಂತೆ ಇತರೆ ಪೊಲೀಸರು ಸ್ಥಳಕ್ಕೆ ತೆರಳಿ ವಾಹನದಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಗಾಯಗೊಂಡವರನ್ನು ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಸಿಬ್ಬಂದಿಯನ್ನು ವೈದ್ಯರ ಸಲಹೆ ಮೇರೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಲಿಸುತ್ತಿದ್ದ ಕಾರು ಹಿಂದೆ ಇದ್ದ ಕಾರಣ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಂತೆ ಹೇಳಿ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಪ್ರಯಾಣ ಮುಂದುವರೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
ಮದ್ದೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಉಪ್ಪಿನಕೆರೆ ಗೇಟ್ ಸಮೀಪದ ಮಳವಳ್ಳಿ- ಮದ್ದೂರು ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಜರುಗಿದೆ.
ತಾಲೂಕಿನ ಗೌಡಯ್ಯನದೊಡ್ಡಿ ಗ್ರಾಮದ ರೇಷ್ಮಾ, ತಾಯಮ್ಮ, ಗಗನ್ ಹಾಗೂ ಮತ್ತೊಂದು ಕಾರಿನ ಚಾಲಕ ದಿಲೀಪ್ ಗಾಯ ಗೊಂಡಿದ್ದಾರೆ. ಗಾಯಾಳುಗಳೆಲ್ಲರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂಲತಃ ಗೌಡನದೊಡ್ಡಿಯ ಕಾರು ಚಾಲಕ ಗಗನ್ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ತಮ್ಮ ಕುಟುಂಬದೊಂದಿಗೆ ಗ್ರಾಮಕ್ಕೆ ಬಂದು ಮದ್ದೂರು- ಮಳವಳ್ಳಿ ರಸ್ತೆ ಮೂಲಕ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಗಗನ್ ಚಾಲನೆ ಮಾಡುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮದ್ದೂರು ಕಡೆಯಿಂದ ಬರುತ್ತಿದ್ದ ದಿಲೀಪ್ ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.