ಸಾರಾಂಶ
ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭ ರಸ್ತೆ ಅಪಘಾತದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕ, ಹೆಡ್ ಕಾನ್‌ಸ್ಟೇಬಲ್ ದುರಂತ ಸಾವು ಕಂಡ ಘಟನೆ ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ದಾವಣಗೆರೆ: ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭ ರಸ್ತೆ ಅಪಘಾತದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕ, ಹೆಡ್ ಕಾನ್‌ಸ್ಟೇಬಲ್ ದುರಂತ ಸಾವು ಕಂಡ ಘಟನೆ ನಗರದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ನಗರದ ತರಳಬಾಳು ಬಡಾವಣೆ ನಿವಾಸಿ, ಹೂವಿನ ಹಡಗಲಿ ತಾಲೂಕಿನ ಇಟಗಿ ಗ್ರಾಮ ಮೂಲದ ಎ.ಗುರುಮೂರ್ತಿ (50) ಮೃತಪಟ್ಟ ದುರ್ದೈವಿ. ಅವರಿಗೆ ಪತ್ನಿ ರೇಖಾ, ಪುತ್ರ ಸಿದ್ದೇಶ್ ಹಾಗೂ ಬಂಧುಗಳಿದ್ದಾರೆ.ಸಂಜೆ 5 ಗಂಟೆ ವೇಳೆಗೆ ಕೆಲಸಕ್ಕೆಂದು ದ್ವಿಚಕ್ರ ವಾಹನದಲ್ಲಿ ಕಚೇರಿಗೆ ಹೊರಟಿದ್ದರು. ದೇವರಾಜ ಅರಸು ಬಡಾವಣೆಯ ಮೇಲ್ಸೇತುವೆ ಮೇಲೆ ಗುರುಮೂರ್ತಿ ಅವರ ದ್ವಿಚಕ್ರ ವಾಹನ ಎದುರಿಗೆ ಬಂದ ಆಟೋ ರಿಕ್ಷಾಗೆ ತಾಗಿದೆ. ಆಯತಪ್ಪಿದ ಗುರುಮೂರ್ತಿ ವಾಹನ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಹೆಲ್ಮೆಟ್ ಧರಿಸಿದ್ದರೂ ಗುರುಮೂರ್ತಿ ಅವರ ಹಣೆ, ಕುತ್ತಿಗೆಗೆ ತೀವ್ರವಾಗಿ ಗಾಯಗೊಂಡರು. ತಕ್ಷಣವೇ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗುರುಮೂರ್ತಿ ಸಾವನ್ನಪ್ಪಿದ್ದಾರೆ.
ಎ.ಗುರುಮೂರ್ತಿ ಪೊಲೀಸ್ ಇಲಾಖೆಯಲ್ಲಿ 1999ರಿಂದ ಕಾರ್ಯನಿರ್ವಹಿಸುತ್ತಿದ್ದರು. ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.- - -
-3ಕೆಡಿವಿಜಿ9, 10.ಜೆಪಿಜಿ: ಎ.ಗುರುಮೂರ್ತಿ