ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವಂತವಾಗಿರುವ ವ್ಯಕ್ತಿಯ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣ ಪತ್ರ ರದ್ದುಪಡಿಸದ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಮಾ.25ರೊಳಗೆ ಮರಣ ಪ್ರಮಾಣ ಪತ್ರ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು ಎಂದು ಬಿಬಿಎಂಪಿ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ತಾಕೀತು ಮಾಡಿದೆ.

ತಾನು ಜೀವಂತವಾಗಿದ್ದರೂ ಹೆಸರಿನಲ್ಲಿ ಬೆಂಗಳೂರಿನ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿಯು 2025ರ ಏ.23ರಂದು ತಾತ್ಕಾಲಿಕ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಅದನ್ನು ರದ್ದುಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಡಿ.ಮೆಹಬೂಬ್‌ ಬಾಷಾ ಎಂಬಾತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರ ಬಾಷಾ ಪರ ವಕೀಲೆ ಓ.ಅಶ್ವಿನಿ, ಅರ್ಜಿದಾರರು ಜೀವಂತವಾಗಿದ್ದರೂ ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿದೆ. ಅರ್ಜಿದಾರರ ಆಧಾರ್‌ ಕಾರ್ಡ್‌ ಅನ್ನು ಪಡಿತರ ಚೀಟಿಗೆ ಸಂಪರ್ಕಿಸಲಾಗಿದೆ. ಈಗ ಅರ್ಜಿದಾರರಿಗೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅದನ್ನು ಪರಿಗಣಿಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಪೀಠ, ಜನನ ಮತ್ತು ಮರಣಗಳ ರಿಜಿಸ್ಟ್ರಾರ್‌ ಅವರು ಅರ್ಜಿದಾರರ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣ ಪತ್ರವನ್ನು ಬುಧವಾರದೊಳಗೆ ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು. ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.


ಅಲ್ಲದೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿ, ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ, ಚಿಕ್ಕಪೇಟೆಯ ವೈದ್ಯಾಧಿಕಾರಿ, ಬಿಬಿಎಂಪಿಯ ಸಾಂಖ್ಯಿಕ ವಿಭಾಗದ ಜಂಟಿ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.