ಪೋಕ್ಸೋ ಪ್ರಕರಣದಡಿ ಕೈದಿಗೆ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌

| N/A | Published : Oct 21 2025, 02:00 AM IST / Updated: Oct 21 2025, 07:27 AM IST

Karnataka Highcourt
ಪೋಕ್ಸೋ ಪ್ರಕರಣದಡಿ ಕೈದಿಗೆ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ನಂತರ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಯಾಗಿ 90 ದಿನ ಕಳೆದರೂ ಶರಣಾಗದ ಮಹಿಳಾ ಸಜಾಬಂಧಿಗೆ ಮತ್ತೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

 ಬೆಂಗಳೂರು :  ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ನಂತರ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆಯಾಗಿ 90 ದಿನ ಕಳೆದರೂ ಶರಣಾಗದ ಮಹಿಳಾ ಸಜಾಬಂಧಿಗೆ ಮತ್ತೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. 

 ಇದೇ ವೇಳೆ ಪೆರೋಲ್‌ ಮೇಲೆ ಬಿಡುಗಡೆಯಾದ ನಂತರ ವಾಪಸಾಗದಿದ್ದರೆ ಎದುರಾಗುವ ಪರಿಣಾಮ ಮತ್ತು ಶಿಕ್ಷೆ ಕುರಿತು ಅಪರಾಧಿಗಳು ಮತ್ತವರ ಕುಟುಂಬಸ್ಥರಿಗೆ ಅರಿವು ಮೂಡಿಸುವಂತೆ ರಾಜ್ಯ ಬಂಧಿಖಾನೆ ಇಲಾಖೆಗೆ ನಿರ್ದೇಶಿಸಿದೆ. ಪೆರೋಲ್‌ ಅವಧಿ ಮುಗಿದ ನಂತರವೂ ಜೈಲಿಗೆ ವಾಪಸಾಗದ್ದಕ್ಕೆ ಹೆಚ್ಚುವರಿಯಾಗಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ರೆವೂರು ಗ್ರಾಮದ 47 ವರ್ಷದ ಮಹಿಳಾ ಸಜಾಬಂಧಿ ಶಕುಂತಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾ. ಸಚಿನ್‌ ಶಂಕರ್ ಮಗದಂ ಅವರ ಪೀಠ ತಿರಸ್ಕರಿಸಿದೆ.

ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ-2022ರ ಸೆಕ್ಷನ್‌ 58ರ ಪ್ರಕಾರ ಪೆರೋಲ್‌ ನಿಯಮಗಳ ಉಲ್ಲಂಘನೆ ಗಂಭೀರ ಸ್ವರೂಪದ ಅಪರಾಧ. ಅದಕ್ಕೆ ಐದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಪೆರೋಲ್‌ ನಿಯಮ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ನಿಗದಿತ ಸಮಯದಲ್ಲಿ ಶರಣಾಗದೆ ಪೆರೋಲ್​ ಷರತ್ತು ಉಲ್ಲಂಘಿಸಿರುವುದು ಅಶಿಸ್ತು. ಆ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕು. ಜತೆಗೆ, ಮೂಲ ಪ್ರಕರಣ ಮತ್ತು ಪೆರೋಲ್‌ ನಿಯಮ ಉಲ್ಲಂಘನೆ ಅಪರಾಧಕ್ಕೆ ವಿಧಿಸಲಾದ ಶಿಕ್ಷೆ ಪ್ರತ್ಯೇಕವಾಗಿರಲಿದೆ ಎಂದೂ ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಮಾರ್ಗಸೂಚಿ ರಚನೆ:

ಅಪರಾಧಿಗಳು ಪೆರೋಲ್​ ಮೇಲೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಜೈಲು ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳು ಮತ್ತು ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸಾಗದ ಕೈದಿಗಳ ವಿರುದ್ಧ ಕೈಗೊಳ್ಳಬಹುದಾದ ಕ್ರಮ ಕುರಿತ ನ್ಯಾಯಪೀಠ ಮಾರ್ಗಸೂಚಿ ರಚಿಸಿದೆ.

- ಪೆರೋಲ್‌ ಮೇಲೆ ಬಿಡುಗಡೆಯಾಗುವ ಅಪರಾಧಿಗೆ ನಿಗದಿತ ಸಮಯದಲ್ಲಿ (ಪರೋಲ್‌ ಅವಧಿ ಮುಗಿದ ನಂತರ) ಶರಣಾಗದಿದ್ದರೆ ಎದುರಿಸುವ ಪರಿಣಾಮದ ಕುರಿತು ಅಪರಾಧಿಗಳಿಗೆ ಅವರಿಗೆ ಗೊತ್ತಿರುವ ಭಾಷೆಯಲ್ಲಿ ಜೈಲು ಅಧೀಕ್ಷಕರು ಅಥವಾ ಪೆರೋಲ್‌ ಅಧಿಕಾರಿ ವಿವರಿಸಬೇಕು.- ಪೆರೋಲ್‌ನ ಷರತ್ತು ಮತ್ತು ಅದರ ಉಲ್ಲಂಘನೆಯ ಕಾನೂನಿನ ಪರಿಣಾಮ ಅರ್ಥಮಾಡಿಕೊಂಡಿರುವುದಾಗಿ ಅಪರಾಧಿಯಿಂದ ಲಿಖಿತ ಮುಚ್ಚಳಿಕೆ ಪಡೆಯಬೇಕು.

- ಬಿಡುಗಡೆಯಾದ ಕೈದಿಗಳ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕನ್ನಡ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಕಿರು ಹೊತ್ತಿಗೆ ಮುದ್ರಿಸಿ ಕೈದಿಗಳು ಮತ್ತವರ ಕುಟುಂಬಸ್ಥರಿಗೆ ಹಂಚಬೇಕು.- ಪೆರೋಲ್‌ ಮೇಲೆ ಬಿಡುಗಡೆ ಮಾಡಿದ ಪ್ರತಿ ಪ್ರಕರಣದ ಬಗ್ಗೆ ರಿಜಿಸ್ಟರ್‌ ನಿರ್ವಹಿಸಬೇಕು. ಅದರಲ್ಲಿ ಬಿಡುಗಡೆಯಾದ ದಿನ, ಅವಧಿ ಮುಗಿಯುವ ದಿನ, ಶರಣಾಗಬೇಕಾಗಿರುವ ದಿನ ಮತ್ತು ಅಪರಾಧಿ ಶರಣಾಗಿದ್ದಾನೆಯೇ ಅಥವಾ ಶರಣಾಗುವಲ್ಲಿ ವಿಳಂಬ ಮಾಡಿದ್ದಾನೆಯೇ, ಅದಕ್ಕೆ ಕಾರಣಗಳನ್ನು ನಮೂದಿಸಬೇಕು. ಕಾರಾಗೃಹಗಳ ಉಪ ಪ್ರಧಾನ ನಿರೀಕ್ಷಕರು ಆ ರಿಜಿಸ್ಟರ್‌ ಅನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು.

- ನಿಗದಿತ ಅವಧಿಯಲ್ಲಿ ಅಪರಾಧಿ ಶರಣಾಗದಿದ್ದಾಗ ಆ ಕುರಿತು 24 ಗಂಟೆಯಲ್ಲಿ ಸ್ಥಳೀಯ ಪೊಲೀಸರಿಗೆ ಜೈಲು ಅಧೀಕ್ಷಕರು ಮಾಹಿತಿ ನೀಡಬೇಕು. ಅಪರಾಧಿಯ ಶರಣಾಗತಿಗೆ ಕ್ರಮ ಜರುಗಿಸಬೇಕು.ಪ್ರಕರಣದ ಹಿನ್ನೆಲೆ:

ಫೋಕ್ಸೋ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಶಕುಂತಲಾ 2022ರ ಮಾ.9ರಂದು ಪೆರೋಲ್​ ಮೇಲೆ ಒಂದು ತಿಂಗಳ ಕಾಲ ಅವಧಿಗೆ ಬಿಡುಗಡೆಯಾಗಿದ್ದರು. ಬಳಿಕ ಪೆರೋಲ್​ ಅವಧಿ 60 ದಿನ ವಿಸ್ತರಿಸಲಾಗಿತ್ತು. 90 ದಿನಗಳ ನಂತರ ಅಂದರೆ 2022ರ ಜೂ.8ರಂದು ವಿಜಯಪುರದ ಕಾರಾಗೃಹಕ್ಕೆ ಶರಣಾಗಬೇಕಾಗಿತ್ತು. ಆದರೆ, ಶರಣಾಗದ ಕಾರಣ ಶಕುಂತಲಾಗೆ ಸ್ಥಳೀಯ ಮ್ಯಾಜಿಸ್ಟ್ರೇಟ್​ ಕೋರ್ಟ್‌ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರು. ದಂಡ ವಿಧಿಸಿತ್ತು. ಇದರಿಂದ ಹೈಕೋರ್ಟ್​ಗೆ ಮೊರೆ ಹೋಗಿದ್ದ ಶಕುಂತಲಾ, ಪೆರೋಲ್​ ಮೇಲೆ ಬಿಡುಗಡೆಯಾದ ಬಳಿಕ ​ಗಂಭೀರ ಕಾಯಿಲೆಗೆ ತುತ್ತಾಗಿದ್ದು, ಮಗನ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೆ. ಇದರಿಂದ ನಿಗದಿತ ಅವಧಿಗೆ ಶರಣಾಗಲು ಸಾಧ್ಯವಾಗಿರಲಿಲ್ಲ. ಪೆರೋಲ್‌ ನಿಯಮ ಉಲ್ಲಂಘಿಸಿರುವುದಕ್ಕೆ ವಿಧಿಸಿರುವ ಜೈಲು ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.

Read more Articles on