ಸಾರಾಂಶ
ಹದಿಮೂರು ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ 52 ವರ್ಷದ ಮಹಿಳೆ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್
ಬೆಂಗಳೂರು : ಹದಿಮೂರು ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ 52 ವರ್ಷದ ಮಹಿಳೆ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಪೋಕ್ಸೋ ಕಾಯ್ದೆಯು ‘ಲಿಂಗ ತಟಸ್ಥ’ ಎಂದು ಸ್ಪಷ್ಟಪಡಿಸಿ ಮಹತ್ವದ ಆದೇಶ ಹೊರಡಿಸಿದೆ.
ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧ ಎಚ್‌ಎಎಲ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಪ್ರಕರಣದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಿತ್ರ ಕಲಾವಿದೆ ಅರ್ಚನಾ ಪಾಟೀಲ್ ಎಂಬುವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪೋಕ್ಸೋ ಕಾಯ್ದೆ ಮಕ್ಕಳ ಬಾಲ್ಯದ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶ ಹೊಂದಿದೆ. ಲಿಂಗ ಭೇದವಿಲ್ಲದೆ 18 ವರ್ಷಕ್ಕಿಂತ ಕಡಿಮೆ ಎಲ್ಲ ವಯಸ್ಸಿನ ಹೆಣ್ಣು ಮತ್ತು ಗಂಡು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲಾಗುತ್ತದೆ ಎಂದು ಹೇಳಿದೆ.
ವಯಸ್ಸಿನ ಅಂತರವಿದೆ-ಸಂಭೋಗ ಅಸಾಧ್ಯ:
ಘಟನೆ ನಡೆದ ನಾಲ್ಕು ವರ್ಷಗಳ ನಂತರ ದೂರು ದಾಖಲಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಘಟನೆ ನಡೆದಾಗ ಅರ್ಜಿದಾರೆಗೆ 48 ವರ್ಷ. ಸಂತ್ರಸ್ತ ಬಾಲಕನಿಗೆ 13 ವರ್ಷ 10 ತಿಂಗಳು. ಅವರ ನಡುವೆ ಹೆಚ್ಚಿನ ವಯಸ್ಸಿನ ಅಂತರ ಇರುವಾಗ ಆರೋಪಿ ಮಹಿಳೆ ಸಂತ್ರಸ್ತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಅದೂ ಬಲವಂತದ ಸಂಭೋಗದಲ್ಲಿ ತೊಡಗುತ್ತಾರೆಂದು ಹೇಳಲಾಗದು ಎಂಬ ಅರ್ಜಿದಾರರ ವಾದವನ್ನು ಪೀಠ ತಿರಸ್ಕರಿಸಿದೆ.
ಸಂಭೋಗದಲ್ಲಿ ಮಹಿಳೆ ಕೇವಲ ನಿಷ್ಕ್ರಿಯವಾಗಿ ಭಾಗವಹಿಸುತ್ತಾರೆ. ಪುರುಷರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಅರ್ಜಿದಾರೆಯ ಕೃತ್ಯದಿಂದ ಸಂತ್ರಸ್ತ ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಅದರಿಂದ ಹೊರಬರಲು ನಾಲ್ಕು ವರ್ಷ ಸಮಯ ಹಿಡಿಯಿತು ಎಂಬ ವಾದ ಸಾಬೀತುಪಡಿಸಲು ದಾಖಲೆಗಳಿಲ್ಲ. ಆರೋಪಿ ಮತ್ತು ದೂರುದಾರರ ಕುಟುಂಬದ ನಡುವೆ ಹಣಕಾಸಿನ ವಹಿವಾಟು ಇತ್ತು. ಪಡೆದ ಹಣ ಹಿಂತಿರುಗಿಸಲಾಗದೆ ಅರ್ಜಿದಾರೆ ವಿರುದ್ಧ ಆರೋಪ ಮಾಡಲಾಗಿದೆ. ಈ ಎಲ್ಲ ಅಂಶ ಪರಿಗಣಿಸಿ ಆರೋಪಿ ಮಹಿಳೆ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರೆ ಪರ ವಕೀಲರ ವಾದವನ್ನು ನ್ಯಾಯಪೀಠ ಸಂಪೂರ್ಣವಾಗಿ ತಿರಸ್ಕರಿಸಿದೆ.
ಬಾಲ್ಯದ ಪಾವಿತ್ರ್ಯತೆ ಹಾಗೂ ಲಿಂಗ ತಾರತಮ್ಯವಿಲ್ಲದೆ ಲೈಂಗಿಕ ದೌರ್ಜನ್ಯಗಳಿಂದ 18 ವರ್ಷದೊಳಗಿನ ಎಲ್ಲ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದಲೇ ಈ ಕಾಯ್ದೆ ಜಾರಿ ಮಾಡಲಾಗಿದೆ. ಮಕ್ಕಳ ಮೇಲಿನ ಬಲವಂತದ ಲೈಂಗಿಕ ಕ್ರಿಯೆ, ಸಂಭೋಗ, ದೌರ್ಜನ್ಯ ಅಪರಾಧ ಹೀಗೆ ಹಲವು ಸ್ವರೂಪವನ್ನು ಕಾಯ್ದೆ ವಿವರಿಸಲಿದೆ. ಪುರುಷ ಮತ್ತು ಮಹಿಳೆ ಇಬ್ಬರನ್ನೂ ಒಳಗೊಳ್ಳುತ್ತದೆ. ಆದ್ದರಿಂದ ಈ ಕಾಯ್ದೆ ಲಿಂಗ ತಟಸ್ಥವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಶಿಕ್ಷಾರ್ಹ ಅಪರಾಧದ ಸಾಕಷ್ಟು ಅಂಶಗಳು ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ನಾಲ್ಕು ವರ್ಷಗಳ ದೂರು ದಾಖಲಿಸಲಾಗಿದೆ ಎಂಬುದು ಪ್ರಕರಣ ರದ್ದುಪಡಿಸುವುದಕ್ಕೆ ಸೂಕ್ತ ಕಾರಣವಲ್ಲ. ಹೆಚ್ಚಿನ ವಯಸ್ಸಿನ ಅಂತರ ಇರುವುದರಿಂದ ಆರೋಪಿ ಮತ್ತು ಸಂತ್ರಸ್ತನ ಲೈಂಗಿಕ ಕ್ರಿಯೆ ನಡೆದಿದೆ ಎಂದು ಹೇಳಲಾಗದು ಎಂಬ ವಾದ ಆಧುನಿಕ ನ್ಯಾಯಶಾಸ್ತ್ರದ ವ್ಯಾಪ್ತಿಯಲ್ಲಿ ಸಮರ್ಥವಾಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹೆಚ್ಚಿನ ವಯಸ್ಸಿನ ಅಂತರ ಇರುವುದರಿಂದ ಆರೋಪಿ ಮಹಿಳೆ ಸಂತ್ರಸ್ತನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಅದೂ ಬಲವಂತದ ಸಂಭೋಗದಲ್ಲಿ ತೊಡಗುತ್ತಾರೆಂದು ಹೇಳಲಾಗದು. ಸಂಭೋಗದಲ್ಲಿ ಮಹಿಳೆ ಕೇವಲ ನಿಷ್ಕ್ರಿಯ ಭಾಗವಹಿಸುವವಳು. ಪುರುಷರು ಸಕ್ರಿಯ ಭಾಗವಹಿಸುವರು ಎಂಬ ವಾದವೇ ಪುರಾತನವಾದದ್ದು. ಮಾನಸಿಕ ಆಘಾತವು ಯಾವಾಗಲೂ ಶಾರೀರಿಕ ಅಥವಾ ಜೈವಿಕ ಪ್ರತಿಕ್ರಿಯೆಗಳಿಗೆ, ವಿಶೇಷವಾಗಿ ಬಲವಂತ ಮತ್ತು ಭಯದ ಪ್ರತಿಕ್ರಿಯೆಗಳಿಗೆ ಮುನ್ನುಡಿ ಬರೆಯುವುದಿಲ್ಲ ಎಂದು ಪೀಠ ನುಡಿದಿದೆ.
ಪ್ರಕರಣದ ವಿವರ:
ಪ್ರಕರಣದ ಸಂತ್ರಸ್ತನ ತಾಯಿ ಎಚ್‌ಎಎಲ್ ಪೊಲೀಸ್ ಠಾಣೆಗೆ 2024 ರ ಜೂ.26 ರಂದು ದೂರು ದಾಖಲಿಸಿ, ಪಕ್ಕದ ಮನೆಯ 52 ವರ್ಷದ ಅರ್ಜಿದಾರೆ ತನ್ನ 13 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚಿತ್ರಕಲೆ ಹೇಳಿಕೊಡುವುದಾಗಿ ಮನೆಯೊಳಗೆ ಕರೆಸಿಕೊಂಡು, ಸಂಭೋಗ ನಡೆಸಿದ್ದಾರೆ. ಈ ಘಟನೆ 2020 ಮೇ.1ರಂದು ಸಂಭವಿಸಿದೆ ಎಂದು ಆರೋಪಿಸಿದ್ದರು. ಪೊಲೀಸರು ತನಿಖೆ ನಡೆಸಿ, ಪೋಕ್ಸೋ ಕಾಯ್ದೆಯಡಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿದಾರೆಯ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಇದರಿಂದ ಪ್ರಕರಣ ರದ್ದು ಕೋರಿ ಆರೋಪಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.