ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!

| N/A | Published : Aug 18 2025, 10:41 AM IST

World Environment Day
ಕಾರ್ಯಕ್ರಮಕ್ಕೆ ಸಾರಿಗೆ ಬಸ್ಸಲ್ಲಿ ಬಂದ ಹೈಕೋರ್ಟ್‌ ನ್ಯಾಯಾಧೀಶರು!
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರದ ಮಹತ್ವ, ಅಗತ್ಯತೆ ಮತ್ತು ಸಂರಕ್ಷಣೆ ಕುರಿತಂತೆ ಉಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳು ಮತ್ತು ರಾಜ್ಯದ ಇಬ್ಬರು ಉಪ ಲೋಕಾಯುಕ್ತರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಂದೇಶ ಸಾರಿದರು.

  ಹೊನ್ನಾವರ :  ಪರಿಸರದ ಮಹತ್ವ, ಅಗತ್ಯತೆ ಮತ್ತು ಸಂರಕ್ಷಣೆ ಕುರಿತಂತೆ ಉಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳು ಮತ್ತು ರಾಜ್ಯದ ಇಬ್ಬರು ಉಪ ಲೋಕಾಯುಕ್ತರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ಭಾನುವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಂದೇಶ ಸಾರಿದರು.

ತಾಲೂಕಿನ ಸಾಲಕೋಡ ಕರಿಕಾನ ಪರಮೇಶ್ವರಿ ಸತ್ಯಸಾಯಿ ಶಿಕ್ಷಣ ಸಂಸ್ಥೆ ಆವಾರ ಅರೇಅಂಗಡಿಯಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ (ಸಹಸ್ರಾರು ವೃಕ್ಷಾರೋಪಣ ಅಭಿಯಾನ) ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿದ ನ್ಯಾ.ಎಸ್.ಜಿ. ಪಂಡಿತ್ ಮಾತನಾಡಿ, ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ವರ್ಷಪೂರ್ತಿ ನಡೆಯಬೇಕು. ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು, ಜಾಗೃತಿ ಮೂಡಬೇಕು. ಪರಿಸರ ಉಳಿಸುವ, ಸಂರಕ್ಷಣೆ ಮಾಡುವ ಕೆಲಸ ಒಂದು ಇಲಾಖೆಗೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಈ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ನ್ಯಾ.ಸಚಿನ್ ಶಂಕರ್ ಮಗದುಮ್, ಗಿಡಗಳನ್ನು ನೆಡುವುದು ಮಾತ್ರವಲ್ಲದೇ ಅವುಗಳನ್ನು ಪೋಷಣೆ ಸಂರಕ್ಷಣೆ ಮಾಡಬೇಕು ಎಂದರು.

ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆಯೂ ವಿದ್ಯಾರ್ಥಿಗಳು ಅರಿಯಬೇಕು ಎಂದು ತಿಳಿಸಿದರು.

ನ್ಯಾ.ಅನಂತ ರಾಮನಾಥ ಹೆಗಡೆ ಮಾತನಾಡಿ, ಇಂದು ನಾವು ಪರಿಸರ ಉಳಿಸುವ ಕಾರ್ಯ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸಂದೇಶ ನೀಡಬೇಕು ಎಂದು ಕರೆ ನೀಡಿದರು.

ನ್ಯಾ. ಸಿ.ಎಂ.ಜೋಷಿ, ಏಕ ಬಳಕೆಯ ಪ್ಲಾಸ್ಟಿಕ್ ಬಳಸುವುದಿಲ್ಲ. ಪ್ಲಾಸ್ಟಿಕ್ ವಸ್ತುಗಳ ಬಳಕೆಯ ನಿಯಂತ್ರಣ, ಪರಿಸರದಿಂದ ಅಗತ್ಯವಿರುವಷ್ಟು ಮಾತ್ರ ಪಡೆದು ಸಮತೋಲನ ಕಾಪಾಡುವಂತೆ ಪ್ರತಿಯೊಬ್ಬರೂ ಸ್ವಯಂ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ತಿಳಿಸಿದರು.

ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಮಾತನಾಡಿ, ಸಕಲ ಜೀವರಾಶಿಗೆ ಪ್ರಕೃತಿ ತಾಯಿಯಿದ್ದಂತೆ. ಹಸಿರು ನಿಂತರೆ ಉಸಿರು ನಿಂತಂತೆ ಎಂಬುದನ್ನು ಎಲ್ಲರೂ ತಿಳಿಯಬೇಕು. ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಿದ್ದು, ಇದನ್ನು ತಡೆದು ಪರಿಸರ ಸಮತೋಲನ ಕಾಪಾಡಬೇಕು ಎಂದು ಹೇಳಿದರು.

ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.

ಸಾರಿಗೆ ಬಸ್ಸಲ್ಲಿ ಬಂದ ನ್ಯಾಯಾಧೀಶರು!

ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ರೈಲಿನಲ್ಲಿ ಆಗಮಿಸುತ್ತಿದ್ದ ಉಪ ಲೋಕಾಯುಕ್ತರಾದ ನ್ಯಾ. ಕೆ.ಎನ್.ಫಣೀಂದ್ರ ಮತ್ತು ನ್ಯಾ. ಬಿ.ವೀರಪ್ಪ ಅರ್ಧ ದಾರಿಗೆ ಬರುವಾಗ ಸಕಲೇಶಪುರ ಬಳಿ ಗುಡ್ಡ ಕುಸಿದು ರೈಲು ಪ್ರಯಾಣ ರದ್ದುಗೊಂಡಿತು. ಆದರೂ ರೈಲ್ವೆ ನಿಲ್ದಾಣದಲ್ಲಿಯೇ ಊಟ ಮಾಡಿ, ಹೊನ್ನಾವರಕ್ಕೆ ಬರುವ ಬಸ್‌ಗೆ ಕಾದು, ಅದರಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಆಗಮಿಸಿದರು.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಜಿಲ್ಲೆಯಲ್ಲಿ ಅರಣ್ಯ ಸಂರಕ್ಷಣೆಯ ಕಾರ್ಯದಲ್ಲಿ ಸಾರ್ವಜನಿಕರು ಅತ್ಯಂತ ಹೆಚ್ಚಿನ ಕೊಡುಗೆ ಮತ್ತು ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ 6000 ಗಿಡಗಳನ್ನು ನೆಡಲಾಗಿದೆ. ಇವುಗಳನ್ನು ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೆಟ್‌ ಜನರಲ್ ಹಾಗೂ ಹಿರಿಯ ಪದಾಂಕಿತ ವಕೀಲ ಮಧುಸೂದನ್ ಆರ್.ನಾಯ್ಕ, ಕರ್ನಾಟಕ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಅಲಂ ಶರೀಫ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಲ್.ಮಾಯಣ್ಣ, ನ್ಯಾಯಾಧೀಶೆ ಸಿ.ಎಂ.ದಿವ್ಯಶ್ರೀ, ಜಿಪಂ ಸಿಇಒ ದಿಲೀಷ್ ಶಶಿ, ಪೊಲೀಸ್ ಅಧೀಕ್ಷಕ ಎಂ.ದೀಪನ್, ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಉಪ ವಿಭಾಗಾಧಿಕಾರಿ ಕಾವ್ಯಾ ರಾಣಿ, ಉಚ್ಚ ನ್ಯಾಯಾಲಯದ ಹಿರಿಯ ಪದಾಂಕಿತ ವಕೀಲ ವಿಘ್ನೇಶ್ವರ ಎನ್.ಶಾಸ್ತ್ರಿ, ಜಿ.ಕೆ.ಭಟ್, ಎಂ.ಎಸ್.ಭಾಗವತ್, ಗಣಪತಿ ನಾರಾಯಣ ಹೆಗಡೆ ತಲೆಕೆರೆ, ಆರ್.ಎಸ್.ರವಿ, ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ನಾಗೇಂದ್ರ ನಾಯ್ಕ, ಶ್ರೀಕಂಠೇಗೌಡ, ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ವಿ.ಎಂ.ಭಂಡಾರಿ ಉಪಸ್ಥಿತರಿದ್ದರು.ವಕೀಲ ಸತೀಶ್ ಭಟ್ ಉಳಗೆರೆ ಸ್ವಾಗತಿಸಿದರು.

Read more Articles on