ಕೋರ್ಟ್‌ ಕಟ್ಟಡದ 5ನೇ ಮಹಡಿಯಿಂದ ಹಾರಿ ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ

| Published : Oct 10 2025, 02:00 AM IST

ಕೋರ್ಟ್‌ ಕಟ್ಟಡದ 5ನೇ ಮಹಡಿಯಿಂದ ಹಾರಿ ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸಿಟಿ ಸಿವಿಲ್ ಕೋರ್ಟ್ ಕಟ್ಟಡದ 5ನೇ ಮಹಡಿಯಿಂದ ಜಿಗಿದು ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸಿಟಿ ಸಿವಿಲ್ ಕೋರ್ಟ್ ಕಟ್ಟಡದ 5ನೇ ಮಹಡಿಯಿಂದ ಜಿಗಿದು ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ.

ರಾಜಸ್ಥಾನ ಮೂಲದ ಗೌತಮ್‌ (35) ಮೃತ ದುರ್ದೈವಿ. ಪೋಕ್ಸೋ ಪ್ರಕರಣದ ವಿಚಾರಣೆ ಸಲುವಾಗಿ ನ್ಯಾಯಾಲಯಕ್ಕೆ ಆತನನ್ನು ಜೈಲಿನಿಂದ ಪೊಲೀಸರು ಕರೆತಂದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಭ್ರೂಣ ನೀಡಿದ ಸಾಕ್ಷ್ಯ:

ತನ್ನ ಕುಟುಂಬದ ಜತೆ ಕೆ.ಆರ್‌. ಪುರದ ಎ.ನಾರಾಯಣಪುರದಲ್ಲಿ ನೆಲೆಸಿದ್ದ ಗೌತಮ್‌, ಕೆ.ಆರ್‌. ಪುರದ ಬಳಿ ಎಲೆಕ್ಟ್ರಿಕಲ್ ಮಾರಾಟ ಮಳಿಗೆ ಇಟ್ಟಿದ್ದ. ಆಡುಗೋಡಿ ಸಮೀಪ ಆತನ ಸೋದರ ಸಂಬಂಧಿ ನೆಲೆಸಿದ್ದಾರೆ. ಬಾಂಧವ್ಯದಲ್ಲಿ ಬಂಧು ಮನೆಗೆ ಆಗಾಗ್ಗೆ ಆತ ಬಂದು ಹೋಗುತ್ತಿದ್ದ. ಆಗ ತನ್ನ ಸೋದರ ಸಂಬಂಧಿಯ 14 ವರ್ಷದ ಪುತ್ರಿಯನ್ನು ಲೈಂಗಿಕವಾಗಿ ಗೌತಮ್‌ ಶೋಷಣೆ ಮಾಡಿದ್ದ.

ಈ ಕೃತ್ಯವು ಆಕೆಯು ಐದು ತಿಂಗಳ ಗರ್ಭಿಣಿಯಾದ ಬಳಿಕ ಕುಟುಂಬದವರಿಗೆ ಗೊತ್ತಾಯಿತು. ತರುವಾಯ ಸಂತ್ರಸ್ತೆ ಗರ್ಭಪಾತ ಸಹ ಆಯಿತು. ಕೊನೆಗೆ ಆಡುಗೋಡಿ ಪೊಲೀಸ್ ಠಾಣೆಗೆ ಸಂತ್ರಸ್ತೆ ಪೋಷಕರು ದೂರು ನೀಡಿದ್ದರು. ಅದರನ್ವಯ ಕಳೆದ ಏಪ್ರಿಲ್ 20 ರಂದು ಗೌತಮ್‌ನನ್ನು ಬಂಧಿಸಿ ಆಡುಗೋಡಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಭ್ರೂಣದ ಡಿಎನ್‌ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಗರ್ಭ ಧರಿಸಲು ಗೌತಮ್‌ನೇ ಕಾರಣ ಎಂಬುದು ಖಚಿತವಾಗಿತ್ತು ಎಂದು ತಿಳಿದು ಬಂದಿದೆ.

ಈ ಪ್ರಕರಣದ ವಿಚಾರಣೆಗೆ ಎಸಿಎಂಎಂ ನ್ಯಾಯಾಲಯಕ್ಕೆ ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸಶಸ್ತ್ರ ಮೀಸಲು ಪೊಲೀಸರು ಕರೆತಂದಿದ್ದರು. ಆಗ ನ್ಯಾಯಾಲಯದ 5ನೇ ಮಹಡಿಯಿಂದ ಜಿಗಿದು ಗೌತಮ್‌ ಮೃತಪಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.

ಪೋಕ್ಸೋ ಪ್ರಕರಣದಲ್ಲಿ ತನ್ನ ವಿರುದ್ಧ ಡಿಎನ್‌ಎ ಸಾಕ್ಷ್ಯದಿಂದ ಆರೋಪಿ ಭೀತಿಗೊಂಡಿದ್ದ. ಅಲ್ಲದೆ ಈ ಕೃತ್ಯದಿಂದ ಆತನನ್ನು ಕುಟುಂಬದವರು ವಿರೋಧಿಸಿದ್ದರು. ಈ ಬೆಳವಣಿಗೆಯಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.