ಸಾರಾಂಶ
ಭಾರತದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಿ ಎಂದು ಕ್ಯಾತೆ ತೆಗೆದಿದ್ದ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಹತ್ಯಾಕಾಂಡ ಮುಂದುವರಿದಿದೆ. ಉತ್ತರ ಬಾಂಗ್ಲಾದೇಶದ ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕರನ್ನು ದುಷ್ಕರ್ಮಿಗಳು ಅಪಹರಿಸಿ, ಬರ್ಬರವಾಗಿ ಕೊಲೆ
ಢಾಕಾ: ಭಾರತದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಿ ಎಂದು ಕ್ಯಾತೆ ತೆಗೆದಿದ್ದ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಹತ್ಯಾಕಾಂಡ ಮುಂದುವರಿದಿದೆ. ಉತ್ತರ ಬಾಂಗ್ಲಾದೇಶದ ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕರನ್ನು ದುಷ್ಕರ್ಮಿಗಳು ಅಪಹರಿಸಿ, ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ ಎಂದು ಅಲ್ಲಿನ ಡೈಲಿ ಸ್ಟಾರ್ ದಿನಪತ್ರಿಕೆ ವರದಿ ಮಾಡಿದೆ.
ಭಾಬೇಶ್ ಚಂದ್ರ ರಾಯ್ (58) ಕೊಲೆಯಾದವರು. ದಿನಜ್‌ಪುರ ಜಿಲ್ಲೆಯ ಬಾಸುದೇಬ್‌ಪುರ ಗ್ರಾಮದ ನಿವಾಸಿಯಾಗಿದ್ದರು. ಇವರು ಬಾಂಗ್ಲಾದೇಶ ಪೂಜಾ ಉದ್ಯಾಪನ ಪರಿಷದ್‌ನ ಬಿರಾಲ್ ವಿಭಾಗದ ಉಪಾಧ್ಯಕ್ಷರಾಗಿದ್ದು, ಪ್ರಭಾವಿ ಹಿಂದೂ ನಾಯಕರಾಗಿದ್ದರು. ಗುರುವಾರ ಸಂಜೆ 4:30ರ ವೇಳೆಗೆ ದುಷ್ಕರ್ಮಿಗಳು ರಾಯ್ ಅವರಿಗೆ ಕರೆ ಮಾಡಿ ಮನೆಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಬಳಿಕ 2 ದ್ವಿಚಕ್ರವಾಹನದಲ್ಲಿ ಬಂದ ನಾಲ್ವರು ರಾಯ್ ಅವರನ್ನು ಅಮಾನವೀಯವಾಗಿ ಅಪಹರಿಸಿ, ನರಬಾರಿ ಎಂಬಲ್ಲಿಗೆ ಕರೆದೋಯ್ದಿದ್ದಾರೆ. ಅಲ್ಲಿ ಅಮಾನುಷವಾಗಿ ಥಳಿಸಿ ರಾಯ್ ಅವರು ಪ್ರಜ್ಞೆ ತಪ್ಪುವಂತೆ ಮಾಡಿ ಮರಳಿ ಮನೆ ಬಳಿಗೆ ತಂದು ಬಿಟ್ಟಿದ್ದಾರೆ ಎಂದು ರಾಯ್ ಅವರ ಪತ್ನಿ ಶಂತನಾ ರಾಯ್ ಹೇಳಿದ್ದಾರೆ.ಕೂಡಲೇ ಮನೆಯವರು ರಾಯ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರ ವೇಳೆಗೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವ ಎಲ್ಲಾ ತಯಾರಿ ನಡೆಸುತ್ತಿದ್ದೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಬ್ದುಸ್ ಸಬೂರ್ ಹೇಳಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಕೊಲೆ ಸಂಬಂಧ ಯಾವುದೇ ಬಂಧನವಾಗಿಲ್ಲ.