ಸಾರಾಂಶ
ಇತ್ತೀಚೆಗೆ ಬೆಂಗಳೂರು, ನಂಜನಗೂಡು ಮತ್ತು ಹೊನ್ನಾವರದಲ್ಲಿ ನಡೆದ ಗೋವುಗಳ ಮೇಲಿನ ವಿಕೃತಿ ಪ್ರಕರಣ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಸೂಚಿಸಿದೆ.
ಬೆಂಗಳೂರು : ಇತ್ತೀಚೆಗೆ ಬೆಂಗಳೂರು, ನಂಜನಗೂಡು ಮತ್ತು ಹೊನ್ನಾವರದಲ್ಲಿ ನಡೆದ ಗೋವುಗಳ ಮೇಲಿನ ವಿಕೃತಿ ಪ್ರಕರಣ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಸೂಚಿಸಿದೆ. ಜೊತೆಗೆ ಪ್ರಕರಣದ ಕುರಿತು ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್ ಅವರೇ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್, ರಾಜ್ಯದಲ್ಲಿ ಗೋಹತ್ಯೆ ಹೆಚ್ಚಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಜೊತೆಗೆ, ಗೋಹತ್ಯೆ ತಡೆಗೆ ಏನಾದರು ಉಪಾಯ ಕಂಡು ಹಿಡಿಯಬೇಕಿದೆ. ಗೋಹತ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಯಾವುದಾದರೂ ಸಂಘಟನೆ ಕೈವಾಡ ಇದೆಯೇ ಅಥವಾ ವ್ಯಕ್ತಿಗಳು ಯಾರಾದರು ಇದ್ದಾರೆಯೇ ಎಂಬುದನ್ನು ನೋಡಬೇಕು. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತು ಸೂಚನೆ ನೀಡಿದ್ದೇನೆ ಎಂದರು.
ಮೈಕ್ರೋ ಫೈನಾನ್ಸ್ ವಂಚನೆ ಕುರಿತು ಪ್ರತಿಕ್ರಿಯಿಸಿ, ಫೈನಾನ್ಸ್ ವಂಚನೆ ತಡೆಗೆ ಹಣಕಾಸು ಇಲಾಖೆ ದಾರಿ ಹುಡುಕಬೇಕು. ನಾವು ಇದರಲ್ಲಿ ಏನೂ ಮಾಡಲು ಆಗುವುದಿಲ್ಲ. ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಯಾವ ಹಂತದಲ್ಲಿ ಚರ್ಚೆಯಾಗಿದೆ ಗೊತ್ತಿಲ್ಲ. ಬಿಜೆಪಿಯವರು ಕಾಂಗ್ರೆಸ್ ಒಡೆದ ಮನೆ ಅನ್ನುತ್ತಿದ್ದರು. ಈಗ ಅವರ ಮನೆಗೆ ಎಷ್ಟು ಬಾಗಿಲು ಎಂದು ಹೇಳಬೇಕು? ಈಗೇನು ಮಾಡ್ತೀರಾ ಅಂತ ಬಿಜೆಪಿ ನಾಯಕರಿಗೆ ಕೇಳುತ್ತೇನೆ ಎಂದರು.
ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ: ಸಚಿವ ಪರಂ
ಘಟನೆಯಲ್ಲಿ ವ್ಯಕ್ತಿ, ಸಂಘಟನೆ ಕೈವಾಡದ ಬಗ್ಗೆ ತನಿಖೆಗೆ ಸೂಚನೆ
ಗರ್ಭಿಣಿ ಹಸು ಹತ್ಯೆ ಖಂಡಿಸಿ ಹೊನ್ನಾವರದಲ್ಲಿ ಪ್ರತಿಭಟನೆ
ಹೊನ್ನಾವರ: ಹೊನ್ನಾವರದಲ್ಲಿ ಗರ್ಭಿಣಿ ಹಸುವಿನ ತಲೆ, ಕಾಲು ಕಡಿದು ಕರು ಎಸೆದು ಹೋದ ವಿಕೃತ ಘಟನೆ ಖಂಡಿಸಿ ಬಿಜೆಪಿ, ಹಿಂದೂಪರ ಸಂಘಟನೆಗಳು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು. ಇದೇ ವೇಳೆ ಘಟನಾ ಸ್ಥಳಕ್ಕೆ ಸೋಮವಾರ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ವಿವರ ಪಡೆದುಕೊಂಡರು
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಬಿವೈವಿ
ಬೆಂಗಳೂರು: ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ ಘಟನೆ ಅತ್ಯಂತ ಅಮಾನುಷ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರತಿಯೊಬ್ಬರೂ ತಲೆ ತಗ್ಗಿಸುವ ಘಟನೆಯಿದು. ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ