ಸಾರಾಂಶ
ಬೆಂಗಳೂರು : ಇತ್ತೀಚೆಗೆ ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲುಗಡೆ ಮಾಡಿದ್ದ ವಾಹನಗಳನ್ನು ಮಾರಕಾಸ್ತ್ರಗಳಿಂದ ಜಖಂಗೊಳಿಸಿ ಪುಂಡಾಟ ಮೆರೆದಿದ್ದ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮೂವರು ಅಪ್ರಾಪ್ತರು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ರತ್ನನಗರ ನಿವಾಸಿ ಜಯಂತ್ (19), ಲಿಖಿತ್ (18), ಕಾಮಾಕ್ಷಿಪಾಳ್ಯದ ಗಗನ್ (23) ಬಂಧಿಸಲಾಗಿದೆ. ಜತೆಗೆ ಮೂವರು ಕಾನೂನು ಸಂಘರ್ಷಕ್ಕೊಳಗಾದವರನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿಗಳು ಸೆ.24 ಮತ್ತು 25ರಂದು ತಡರಾತ್ರಿ ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಮಾರಕಾಸ್ತ್ರದಿಂದ ರಸ್ತೆ ಬದಿ ನಿಲುಗಡೆ ಮಾಡಿದ್ದ ಸುಮಾರು 25ಕ್ಕೂ ಅಧಿಕ ವಾಹನಗಳ ಜಖಂಗೊಳಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹವಾ ಸೃಷ್ಟಿಸಲು ಪುಂಡಾಟ: ಬಂಧಿತ ಆರೋಪಿಗಳ ಪೈಕಿ ಮೂವರು ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ಬ್ಯಾಡರಹಳ್ಳಿ ಮತ್ತು ಅನ್ನಪೂರ್ಣೇಶ್ವರಿನಗರದಲ್ಲಿ ತಮ್ಮ ಎದುರಾಳಿ ತಂಡ ಹಾಗೂ ಆ ಪ್ರದೇಶದಲ್ಲಿ ಹೆದರಿಕೆ ಸೃಷ್ಟಿಸಲು ವಾಹನಗಳನ್ನು ಹಾನಿಗೊಳಿಸಿ ಪುಂಡಾಟ ಮೆರೆದಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ಅದೇ ದಿನ ರಸ್ತೆಯಲ್ಲಿ ಇಬ್ಬರು ಪಾದಚಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ ಮಾಡಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
)
)
;Resize=(128,128))
;Resize=(128,128))
;Resize=(128,128))