ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ದುಷ್ಕರ್ಮಿಗಳಿಂದ ರೌಡಿಶೀಟರ್ ಭೀಕರ ಹತ್ಯೆ..!

| Published : Jan 20 2025, 01:32 AM IST / Updated: Jan 20 2025, 04:38 AM IST

crime uttar pradesh

ಸಾರಾಂಶ

ರೌಡಿಶೀಟರ್ ನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ‌. ಗ್ರಾಮದ ಸುಪ್ರೀತ್ ಅಲಿಯಾಸ್ ಸುಪ್ಪಿ (30) ಕೊಲೆಯಾದ ರೌಡಿಶೀಟರ್. ಜೊತೆಗೆ ಸುಪ್ರೀತ್ ಸ್ನೇಹಿತ ಅರ್ಜುನ್ ಎಂಬಾತನ ಮೇಲೂ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 ಶ್ರೀರಂಗಪಟ್ಟಣ : ರೌಡಿಶೀಟರ್ ನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ‌.

ಗ್ರಾಮದ ಸುಪ್ರೀತ್ ಅಲಿಯಾಸ್ ಸುಪ್ಪಿ (30) ಕೊಲೆಯಾದ ರೌಡಿಶೀಟರ್. ಜೊತೆಗೆ ಸುಪ್ರೀತ್ ಸ್ನೇಹಿತ ಅರ್ಜುನ್ ಎಂಬಾತನ ಮೇಲೂ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೊಲೆಯಾದ ರೌಡಿಶೀಟರ್ ಸುಪ್ರಿತ್ ಗ್ರಾಮದ ಹೊರ ವಲಯದಲ್ಲಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಶೆಡ್ ಮಾಡಿಕೊಂಡು ರೇಸ್ ಎತ್ತುಗಳನ್ನು ಸಾಕಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದ ಒಂಟಿ ಎತ್ತಿನ ಓಟದ ಸ್ವರ್ಧೆಯಲ್ಲಿ ಪಾಲ್ಗೊಂಡು ದ್ವೀತಿಯ ಬಹುಮಾನ ಕೂಡ ಪಡೆದಿದ್ದರು.

ಶನಿವಾರ ಬೆಳಗ್ಗೆ ವಾಪಸ್ ಗ್ರಾಮಕ್ಕೆ ಬಂದಿದ್ದನು. ಮಧ್ಯಾಹ್ನ ತನ್ನ ಜಮೀನಿಗೆ ಸುಪ್ರೀತ್ ಸ್ನೇಹಿತರಾದ ಅರ್ಜುನ್ ಹಾಗೂ ರಿಷಿ ಹೋಗಿ ಶೆಡ್‌ನಲ್ಲಿ ಇದ್ದರು. ನಂತರ ಸುಪ್ರೀತ್ ಮನೆಗೆ ವಾಪಸ್ ಬಂದಿದ್ದರು.

ಆದರೆ, ಸ್ನೇಹಿತರಾದ ಅರ್ಜುನ್ ಹಾಗೂ‌ ರಿಷಿ ಇಬ್ಬರು ಜಮೀನಿನ ಶೆಡ್‌ನಲ್ಲಿಯೇ ಉಳಿದುಕೊಂಡಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ದುಷ್ಕರ್ಮಿಗಳು ರಾತ್ರಿ ವೇಳೆ ಶೆಡ್ ಬಳಿ ಬಂದು ಅರ್ಜುನ್‌ನ ಬಟ್ಟೆ ಬಿಚ್ಚಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಅಲ್ಲದೇ, ರಿಷಿ ಮೇಲೂ ಹಲ್ಲೆ ಮಾಡಿ ಮನೆಯಲ್ಲಿ ಇದ್ದ ರೌಡಿಶೀಟರ್ ಸುಪ್ರೀತ್ ನನ್ನು ಶೆಡ್ ಬಳಿ ಬರುವಂತೆ ಹೇಳಿದ್ದಾರೆ. ಆಗ ಸುಪ್ರೀತ್ ತನ್ನ ಸ್ನೇಹಿತನ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದು ಬೈಕ್‌ನಲ್ಲಿ ತನ್ನ ಜಮೀನಿಗೆ ಬಂದಿದ್ದಾನೆ. ಈ ವೇಳೆ ಜಮೀನನ ಬಳಿ ಇದ್ದ ಏಳೆಂಟು ದುಷ್ಕರ್ಮಿಗಳು ಏಕಾಏಕಿ ಜಮೀನನ ಬಳಿ ಬಂದ ಸುಪ್ರೀತ್ ಮೇಲೆ ಹಲ್ಲೆ ಮಾಡಿದ್ದಾರೆ.

ನಂತರ ಸುಪ್ರೀತ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೂ ಮೊದಲು ಸುಪ್ರೀತ್‌ನ ಬಟ್ಟೆ ಬಿಚ್ಚಿ, ಟಿ ಶರ್ಟ್ ಒಂದನ್ನು ಅಲ್ಲಿಯೇ ಬಿಟ್ಟು ಪ್ಯಾಂಟ್ ಅನ್ನು ಸುಟ್ಟು ಹಾಕಿದ್ದಾರೆ. ಜೊತೆಗೆ ಹತ್ಯೆಗೆ ಬಳಸಿದ ಕಲ್ಲನ್ನು ಸಹಾ ಆರೋಪಿಗಳು ತೆಗೆದುಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅರ್ಜುನ್ ನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಪಾಲಹಳ್ಳಿಯಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ‌ರೌಡಿಶೀಟರ್ ಹತ್ಯೆ ನಡೆದಿರುವುದಾಗಿ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.