ರಾಯಚೂರಲ್ಲಿ ವಕ್ಫ್ ಜಾಗದಲ್ಲಿನ ಮನೆ, ಅಂಗಡಿ ತೆರವು : ಪ್ರತಿಭಟನೆ

| N/A | Published : May 22 2025, 01:50 AM IST / Updated: May 22 2025, 10:30 AM IST

MP Waqf Property

ಸಾರಾಂಶ

ವಕ್ಫ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಮನೆ ಹಾಗೂ ಅಂಗಡಿಗಳ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರತಿಭಟನೆ ಮಾಡಿರುವ ಪ್ರಸಂಗ ರಾಯಚೂರು ನಗರದಲ್ಲಿ ನಡೆದಿದೆ.

 ರಾಯಚೂರು : ವಕ್ಫ್‌ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಮನೆ ಹಾಗೂ ಅಂಗಡಿಗಳ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರತಿಭಟನೆ ಮಾಡಿರುವ ಪ್ರಸಂಗ ರಾಯಚೂರು ನಗರದಲ್ಲಿ ನಡೆದಿದೆ.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಹಿಂಬದಿಯಲ್ಲಿರುವ ಹಾಶ್ಮಿಯಾ ಮಸೀದಿಯ ಅಕ್ಕ-ಪಕ್ಕದಲ್ಲಿ ಹಲವು ದಶಕಗಳಿಂದ ಮನೆ ಹಾಗೂ ವಾಣಿಜ್ಯ ಮಳಿಗೆಗಳು ಇವೆ. ವಕ್ಫ್‌ಗೆ ಸೇರಿದ್ದ ಜಾಗದ ಒತ್ತುವರಿಯನ್ನು ತೆರವುಗೊಳಿಸುವಂತೆ ವಕ್ಫ್ ಮಂಡಳಿಯಿಂದಲೇ ದೂರು ಸಲ್ಲಿಕೆಯಾಗಿದ್ದು, ಕಲಬುರಗಿ ವಕ್ಫ್ ಟ್ರಿಬ್ಯೂನಲ್‌ ತೆರವು ಮಾಡುವಂತೆ ಆದೇಶಿಸಿತ್ತು. ಈ ಆದೇಶ ಮೇರೆಗೆ ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಬುಧವಾರ ಬೆಳಂಬೆಳಗ್ಗೆ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಐದಾರು ಜೆಸಿಬಿಗಳನ್ನು ಬಳಸಿ ತೆರವು ಮಾಡಲಾಯಿತು. ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಅಲ್ಲಿಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಲು ಮುಂದಾದರು. ಈ ವೇಳೆ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಏಕಾಏಕಿ ಎಲ್ಲಿಗೆ ಹೋಗಬೇಕು:

ಹಾಶ್ಮೀಯಾ ಮೈದಾನದಲ್ಲಿ ಸುಮಾರು 34 ಕುಟುಂಬಗಳು ವಾಸವಾಗಿದ್ದು, 20ಕ್ಕೂ ಹೆಚ್ಚು ಅಂಗಡಿಗಳು ಇವೆ. ಸ್ಥಳೀಯರು ವ್ಯಾಪಾರ ವಹಿವಾಟು ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ಇದೀಗ ಏಕಾಏಕಿ ಜಾಗ ಖಾಲಿ ಮಾಡುವಂತೆ ಸೂಚಿಸಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ವಿಪರ್ಯಾಸ ಎಂದರೆ ಇಲ್ಲಿ ವಾಸಿಸುತ್ತಿರುವವರಲ್ಲಿ ಬಹುತೇಕರು ಬಾಡಿಗೆದಾರರಾಗಿದ್ದಾರೆ. ವಕ್ಫ್ ಸ್ಥಳ ಒತ್ತುವರಿ ಮಾಡಿ ಮನೆ ಕಟ್ಟಿದವರು ಬೇರೆ ಕಡೆ ನೆಲೆಸಿದ್ದಾರೆ. ಅಲ್ಲದೇ, ಹೋಟೆಲ್‌, ವಿವಿಧ ವಾಣಿಜ್ಯ ಉದ್ದೇಶಗಳಿಗೂ ಬಾಡಿಗೆ ನೀಡಿದ್ದಾರೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆಯೇ ಒತ್ತುವರಿ ತೆರವು ಮಾಡುವಂತೆ ಅಂಗಡಿ ಮುಂಗಟ್ಟುಗಳು, ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅದನ್ನು ಸ್ಥಳೀಯರು ನಿರ್ಲಕ್ಷಿಸಿದ್ದರು. ಬುಧವಾರ ದಿಢೀರ್ ಕಾರ್ಯಾಚರಣೆ ಆರಂಭಿಸಿದ ಜೆಸಿಬಿಗಳು ಕಟ್ಟಡಗಳ ನೆಲಸಮ ಮಾಡಿದವು.

Read more Articles on