ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದ ಮೇಲೆ ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 7 ಮಂದಿಯನ್ನು ಸೆರೆ ಹಿಡಿದು 9.93 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿ.ಸಿ.ರೋಡ್‌ನ ಅಭಿಷೇಕ್, ಮೊಹಮ್ಮದ್ ಶಮ್ಮೀರ್, ಜಬೀರ್, ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ನಗರದ ಥಾಮಸ್ ನವೀದ್ ಚೀಮಿ, ನಗ್ವು ಕಿಂಗ್ಲ್ಸೇಲೆ, ಲಕ್ಕಸಂದ್ರದ ರಂಜಿತ್ ಅಂಥೋನಿ ಮ್ಯಾಥ್ಯುವ್ ಹಾಗೂ ಬೆನ್ನಿಗಾನಹಳ್ಳಿಯ ಕೆವಿನ್ ರೋಜರ್ ಬಂಧಿತರಾಗಿದ್ದಾರೆ. ಈ ಪೆಡ್ಲರ್‌ಗಳಿಂದ 3.858 ಕೆಜಿ ಎಂಡಿಎಂಎ ಕ್ರಿಸ್ಟೆಲ್, 41 ಗ್ರಾಂ ಎಕ್ಸೈಟೆಸಿ ಫಿಲ್ಸ್, 1.082 ಗ್ರಾಂ ಹೈಡ್ರೋ ಗಾಂಜಾ, 6 ಕೆಜಿ ಗಾಂಜಾ ಹಾಗೂ ಕಾರು ಸೇರಿ ಒಟ್ಟು 9.93 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಹದೇವಪುರ, ಆಡುಗೋಡಿ, ಸಿದ್ದಾಪುರ, ಕೆ.ಜಿ.ನಗರ ಹಾಗೂ ಹೆಬ್ಬಗೋಡಿ ಠಾಣೆಗಳ ವ್ಯಾಪ್ತಿಯಲ್ಲಿ ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸಿಮ್ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.ಟೆಕ್ಕಿ, ದಂತ ವೈದ್ಯ ವಿದ್ಯಾರ್ಥಿ ಸೆರೆ!
ಮೊದಲು ಮಾದಕ ವಸ್ತು ವ್ಯಸನಿಗಳಾಗಿ ಬಳಿಕ ಪೆಡ್ಲರ್‌ಗಳಾಗಿದ್ದ ಕೇರಳ ಮೂಲದ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ರಂಜಿತ್ ಮತ್ತು ಸಾಫ್ಟ್‌ವೇರ್ ಉದ್ಯೋಗಿ ರೋಜರ್ ಪ್ರತ್ಯೇಕವಾಗಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆಡುಗೋಡಿಯಲ್ಲಿ ರಂಜಿತ್ ಸಿಕ್ಕಿಬಿದ್ದಿದ್ದು, ಆತನಿಂದ 32 ಲಕ್ಷ ರು. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ಡ್ರಗ್ಸ್ ಚಟ ಬಿಡಿಸಲು ಪುನರ್ವಸತಿ ಕೇಂದ್ರಕ್ಕೂ ರಂಜಿತ್‌ನನ್ನು ಆತನ ಪೋಷಕರು ಸೇರಿಸಿದ್ದರು. ಆದರೆ ವ್ಯಸನ ಮುಕ್ತನಾಗದೆ ಅದೇ ವೃತ್ತಿ ಮಾಡಿಕೊಂಡಿದ್ದ.ಹಾಗೆಯೇ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿ ಕೈ ತುಂಬಾ ಸಂಬಳ ಪಡೆಯುತ್ತಿದ್ದು ಡ್ರಗ್ಸ್ ವ್ಯಸನದಿಂದ ಪೆಡ್ಲರ್ ಆಗಿದ್ದ ರೋಜರ್ ಈಗ ಜೈಲು ಸೇರಿದ್ದಾನೆ. ಈತನಿಂದ 72 ಲಕ್ಷ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಈ ಇಬ್ಬರು ಆನ್‌ಲೈನ್ ಮೂಲಕ ಥಾಯ್ಲೆಂಡ್ ನಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳೇ ಈ ಆರೋಪಿಗಳ ಗ್ರಾಹಕರಾಗಿದ್ದರು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ತನಿಖೆ ಮುಂದುವರಿದಿದೆ. ಈ ಇಬ್ಬರನ್ನು ಇನ್ಸ್‌ಪೆಕ್ಟರ್ ಮಂಜಪ್ಪ ಬಂಧಿಸಿದ್ದಾರೆ ಎಂದು ಸಿಸಿಬಿ ಹೇಳಿದೆ.
ಮಂಗಳೂರು-ಬೆಂಗಳೂರಿಗೆ ಗಾಂಜಾಹೊರ ರಾಜ್ಯದಿಂದ ಮಂಗಳೂರು ಹಾಗೂ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದ ಬಂಟ್ವಾಳ ಗ್ಯಾಂಗ್ ಅನ್ನು ಸಿಸಿಬಿ ಸೆರೆ ಹಿಡಿದಿದೆ. ಬಂಟ್ವಾಳದ ಅಭಿಷೇಕ್, ಶಮ್ಷೀರ್ ಹಾಗೂ ಜಬೀರ್ ಬಂಧಿತರಾಗಿದ್ದು, ಆರೋಪಿಗಳಿಂದ 6 ಕೆಜಿ ಗಾಂಜಾ ಜಪ್ತಿಯಾಗಿದೆ. ಒಡಿಶಾ ರಾಜ್ಯದ ಗಾಂಜಾ ದಂಧೆಕೋರರಿಂದ ಗಾಂಜಾ ತಂದು ಬಳಿಕ ಸಬ್ ಪೆಡ್ಲರ್‌ಗಳಿಗೆ ಈ ಗ್ಯಾಂಗ್ ಮಾರಾಟ ಮಾಡುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್ ರಕ್ಷಿತ್ ತಂಡ ಬಂಧಿಸಿದೆ. ಆರೋಪಿಗಳು ಆಟೋ ಚಾಲಕರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಚೆ ಮೂಲಕ ಬಂತು 1 ಕೋಟಿ ಗಾಂಜಾ!ವಿದೇಶದಿಂದ ಅಂಚೆ ಮೂಲಕ ನಗರಕ್ಕೆ ಬಂದಿದ್ದ 1 ಕೋಟಿ ರು. ಮೌಲ್ಯದ 1.22 ಕೆಜಿ ಹೈಡ್ರೋ ಗಾಂಜಾವನ್ನು ಸಿಸಿಬಿ ಜಪ್ತಿ ಮಾಡಿದೆ. ವಿದೇಶದಿಂದ ಗಾಂಜಾ ಖರೀದಿಸಿದ್ದ ಪೆಡ್ಲರ್ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಮುಂದುವರಿಸಿದೆ.
ವಿದೇಶಿ ಪೆಡ್ಲರ್‌ಗಳ ಬಳಿ 7 ಕೋಟಿ ಮೌಲ್ಯದ ಡ್ರಗ್ಸ್ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾದ ಥಾಮಸ್ ಹಾಗೂ ನಗ್ವು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ನೀಲಾದ್ರಿ ನಗರದಲ್ಲಿ ನೆಲೆಸಿದ್ದ ಈ ಆರೋಪಿಗಳಿಂದ 3.858 ಕೆಜಿ ಎಡಿಎಂಎ ಕ್ರಿಸ್ಟೆಲ್ ಹಾಗೂ 41 ಗ್ರಾಂ 82 ಎಕ್ಸೈಟೆಸಿ ಪೀಲ್ಸ್‌ಗಳು ಸೇರಿ 7.80 ಕೋಟಿ ರು. ಜಪ್ತಿ ಮಾಡಿದ್ದಾರೆ. ಭಾರತಕ್ಕೆ 2019ರಲ್ಲಿ ಮೆಡಿಕಲ್ ವೀಸಾದಡಿ ಥಾಮಸ್ ಹಾಗೂ ಶೈಕ್ಷಣಿಕ ವೀಸಾದಡಿ ನುಗ್ವೇ ಬಂದಿದ್ದರು. ಬಳಿಕ ಹಣದಾಸೆಯಿಂದ ಡ್ರಗ್ಸ್ ಮಾರಾಟಕ್ಕಿಳಿದಿದ್ದ ಇಬ್ಬರು ಎರಡು ಮೂರು ಬಾರಿ ಜೈಲೂಟ ಸವಿದಿದ್ದಾರೆ. ಆದರೂ ಸಹ ತಮ್ಮ ಚಾಳಿ ಬಿಟ್ಟಿರಲಿಲ್ಲ. ಮೊದಲು ಆನ್‌ಲೈನ್ ಸೈಬರ್ ವಂಚನೆ ಕೃತ್ಯ ಆರಂಭಿಸಿದ್ದ ನಗ್ವುನನ್ನು ಗುಜರಾತ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದೆ ನಗರಕ್ಕೆ ಬಂದು ಆತ ಡ್ರಗ್ಸ್ ದಂಧೆಗಿಳಿದಿದ್ದ. ಈ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಸಾರಥ್ಯದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.